ಬೆಂಗಳೂರು: ಕೊರೊನಾ ಭೀತಿಯಿಂದ ಬರೋಬ್ಬರಿ 10 ತಿಂಗಳುಗಳಿಂದ ಬಂದ್ ಆಗಿದ್ದ ಶಾಲೆ ಹಾಗೂ ಕಾಲೇಜುಗಳು ಇಂದಿನಿಂದ ಪುನರಾರಂಭಗೊಳ್ಳಲಿವೆ.
ಎಲ್ಲೆಡೆ ಹೊಸ ವರ್ಷದ ಸಂಭ್ರಮ ಮನೆ ಮಾಡಿದ್ದು, ಹೊಸ ಹುರುಪಿನೊಂದಿಗೆ ಮಕ್ಕಳು ಶಾಲೆಯತ್ತ ಹೆಜ್ಜೆ ಹಾಕಲು ತುದಿಗಾಲಲ್ಲಿ ನಿಂತಿದ್ದಾರೆ. ಈ ನಡುವೆ ವಿದ್ಯಾರ್ಥಿಗಳನ್ನು ಸ್ವಾಗತಿಸಲು ಶಾಲೆಗಳು ಸಹ ಸಕಲ ಸಿದ್ಧತೆ ಸುರಕ್ಷತಾ ಕ್ರಮಗಳೊಂದಿಗೆ ಸಜ್ಜಾಗಿವೆ.
ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಗೆ ಮಾತ್ರ ಶಾಲೆಗಳಲ್ಲಿ ತರಗತಿ ಚಟುವಟಿಕೆ ಆರಂಭವಾಗಲಿವೆ. 6 ರಿಂದ 98ನೇ ತರಗತಿಗೆ ವಿದ್ಯಾಗಮ ಯೋಜನೆ ಮೂಲಕ ಕಲಿಕೆ ನಡೆಯಲಿದೆ. ಸರ್ಕಾರದ ಮಾರ್ಗಸೂಚಿಯಂತೆ ಬೆಂಗಳೂರು ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲೂ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ ವರ್ಗ ಶಾಲೆ, ಕಾಲೇಜುಗಳನ್ನು ಸಿಬ್ಬಂದಿ ವರ್ಗ ಶಾಲೆ, ಕಾಲೇಜುಗಳನ್ನು ಸೋಂಕು ನಿವಾರಣಾ ದ್ರಾವಣದಿಂದ ಸ್ವಚ್ಛಗೊಳಿಸಿವೆ.
ಮಾಜಿಕ ಅಂತರ ಕಾಯ್ದುಕೊಳ್ಳಲು ಸರತಿ ಸಾಲಿನಲ್ಲಿ ವಿದ್ಯಾರ್ಥಿಗಳು ಬರಲು 3 ಅಡಿಗೊಂಡು ವೃತ್ತಗಳನ್ನು ಹಾಕಲಾಗಿದೆ.
ಜಾಗೃತಿಗಾಗಿ ಶಾಲೆಯ ಪ್ರಮುಖ ಸ್ಥಳಗಳಲ್ಲಿ ಕೋವಿಡ್ ನಿಯಮಗಳನ್ನು ನೆನಪಿಸುವ ಪೋಸ್ಟರ್ ಗಳನ್ನು ಅಂಟಿಸಲಾಗಿದೆ. ಕೆಲವೆಡೆ ವಿದ್ಯಾರ್ಥಿಗಳ ತಪಾಸಣೆಗೆ ಶಾಲೆಗಳೇ ನರ್ಸ್’ಗಳನ್ನು ನೇಮಕ ಮಾಡಿಕೊಂಡಿವೆ. ಕೆಲ ಶಾಲೆ, ಕಾಲೇಜುಗಳು ತಳಿರು ತೋರಣಗಳ ಸಿಂಗಾರ, ಬ್ಯಾಂಡ್ ಬಾಜಾ ಮೂಲಕ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲು ಕಾತರದಿಂದ ಕಾಯುತ್ತಿವೆ.
ಹೀಗೆ ಸರ್ಕಾರವೇನೋ 10 ತಿಂಗಳಿಂದ ಬಂದ್ ಆಗಿದ್ದ ಶಾಲೆ, ಕಾಲೇಜುಗಳನ್ನು ನಿಗದಿಯಂತೆ ಆರಂಭಿಸುತ್ತಿದೆ. ಆದರೆ, ಇನ್ನೂ ಪೂರ್ಣ ನಿಯಂತ್ರಣಕ್ಕೆ ಬಾರದ ಕೊರೋನಾ ಸೋಂಕು, ಇದರ ನಡುವೆಯೇ ರಾಜ್ಯಕ್ಕೆ ಕಾಲಿಟ್ಟಿರುವ ಬ್ರಿಟನ್ ರೂಪಾಂತರಿ ವೈರಸ್ ನ ಆತಂಕದ ಮಧ್ಯೆ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಎಷ್ಟರ ಮಟ್ಟಿಗೆ ಧೈರ್ಯ ಮಾಡುತ್ತಾರೆ. ಎಷ್ಟು ಪ್ರಮಾಣದಲ್ಲಿ ವಿದ್ಯಾರ್ಥಿಗಳು ಹಾಜರಾಗುತ್ತಾರೆಂಬುದನ್ನು ಕಾದು ನೋಡಬೇಕಿದೆ.