ದಾವಣಗೆರೆ: ರಾಜಕೀಯ ಒತ್ತಡ ಇಲ್ಲದಿದ್ದರಿಂದ ಕುರುಬ ಸಮಾಜಕ್ಕೆ ಎಸ್ಟಿ ಮೀಸಲಾತಿ ಸಿಕ್ಕಿಲ್ಲ. ಹೀಗಾಗಿ ಹೋರಾಟದ ಮೂಲಕ ನಾವು ಮೀಸಲಾತಿ ಹಕ್ಕು ಪಡೆಯಬೇಕಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು.
ಜಿಲ್ಲೆಯ ಬೆಳ್ಳೂಡಿ ಶಾಖಾ ಮಠದಲ್ಲಿ ನಡೆಯುತ್ತಿರುವ ಕುರುಬ ಎಸ್ಟಿ ಮೀಸಲಾತಿ ಚಿಂತನಾ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿಗೆ ಕುರುಬ ಸಮಾಜದ ಬೇಡಿಕೆ ಅರ್ಥೈಸುವ ಪ್ರಯತ್ನ ಮಾಡಿದ್ದೇವೆ. ಪ್ರಧಾನಿ ಮೋದಿಯವರ ಕಿವಿಗೂ ನಮ್ಮ ಹೋರಾಟ ಮುಟ್ಟಬೇಕು. ಕುರುಬರ ಎಸ್ಟಿ ಮೀಸಲು ಹೋರಾಟ ಯಾವ ಜನಾಂಗದ ವಿರುದ್ಧ ಅಲ್ಲ. ಎಸ್ಟಿ ಅರ್ಹತೆ ಹೊಂದಿರುವ ಎಲ್ಲ ಸಮಾಜಗಳ ಪರವಾಗಿ ನಾವು ಹೋರಾಟ ಮಾಡುತ್ತೇವೆ. ಇದೀಗ ನಮ್ಮ ಶಕ್ತಿ ಪ್ರದರ್ಶನ ಆಗತ್ಯತೆ ಇದೆ ಎಂದು ತಿಳಿಸಿದರು.
ಜನವರಿ 15ರಂದು ಕಾಗಿನೆಲೆಯಿಂದ ಬೆಂಗಳೂರಿಗೆ ಪಾದಯಾತ್ರೆ ಪ್ರಾರಂಭವಾಗಲಿದ್ದು, ಫೆ. 7ರಂದು ಬೆಂಗಳೂರಿನಲ್ಲಿ ಎಸ್ಟಿ ಹೋರಾಟ ಸಮಾವೇಶ ನಡೆಯಲಿದೆ. ಈ ಹೋರಾಟದಲ್ಲಿ ಕನಿಷ್ಠ 10 ಲಕ್ಷ ಜನ ಬೆಂಗಳೂರಲ್ಲಿ ಸೇರಬೇಕು ಎಂದು ಕರೆ ನೀಡಿದರು. ಮಾರ್ಚ್ ತಿಂಗಳಲ್ಲಿ ಒಡೆಯರ ಕುಲದವರಿಗೆ ರಾಜ್ಯಮಟ್ಟದ ಪ್ರತ್ಯೇಕ ಸಮಾವೇಶ ನಂತರ, ಜಿಲ್ಲಾ ಮಟ್ಟದ ಸಮಾವೇಶ ಆಯೋಜಿಸಲಾಗಿದೆ. ಒಡೆಯರ ಅಭಿವೃದ್ಧಿಗೆ ಅಗತ್ಯ ಸೌಲಭ್ಯ ಕಲ್ಪಿಸುವ ಪ್ರಯತ್ನ ಮಾಡಲಾಗಲಾಗುವುದು. ಎಸ್ಟಿ ಮೀಸಲು ದೊರೆಯುವವರೆಗೂ ಹೋರಾಟ ನಿರಂತರ ಎಂದು ತಿಳಿಸಿದರು.



