ಬೆಂಗಳೂರು : ಈ ಬಾರಿಯ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಶೇ.60ಕ್ಕೂ ಹೆಚ್ಚು ಅಭಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ಸಾಮೂಹಿಕ ನಾಯಕತ್ವ, ಕಾರ್ಯಕರ್ತರ ಶ್ರಮದ ಪ್ರತಿಫಲವಾಗಿ 3000 ಸಾವಿರಕ್ಕೂ ಹೆಚ್ಚು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ ಎಂದು ಸಿಎಂ ಯಡಿಯೂರಪ್ಪ ಸಂತಸ ವ್ಯಕ್ತಪಡಿಸಿದರು.
ಈ ಕುರಿತಂತೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಜೆಟ್ ನಲ್ಲಿ ನಿಗದಿ ಪಡಿಸಿದ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುತ್ತದೆ. ಅತಿವೃಷ್ಠಿ, ಕೊರೊನಾ, ಬರಗಾಲದ ಮಧ್ಯೆಯೂ ನನಗೊಂದು ಕನಸಿದೆ. ರಾಜ್ಯವನ್ನು ಅಭಿವೃದ್ಧಿಯ ಭೂಪಟದಲ್ಲಿ 1ನೇ ಸ್ಥಾನಕ್ಕೆ ಕೊಂಡೊಯ್ಯವುದು. ಆ ಕೆಲಸವನ್ನ ಸಂಪುಟದ ಸಹೋದ್ಯೋಗಿಗಳ ಜೊತೆಗೆಗೂಡಿ ಮಾಡುತ್ತೇನೆ ಎಂದರು.
2027ರವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸಬೇಕು ಎನ್ನುವ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರ ರೂಪಿಸಿದೆ. ರೈತರ ಶ್ರೇಯೋಭಿವೃದ್ಧಿಗಾಗಿಯೇ ಕೃಷಿ ಮಾರುಕಟ್ಟೆ ಸುಧಾರಣೆಗಾಗಿ ಕಾಯ್ದೆಗೆ ತಿದ್ದು ಪಡಿ ತಂದಿದ್ದಾರೆ. ಈ ಮೂಲಕ ರೈತರು ಎಲ್ಲಿ ಬೇಕಾದರು ತಾವು ಬೆಳೆದಂತ ಬೆಳೆಯನ್ನು ಮಾರಾಟ ಮಾಡಲು ಅನುಕೂಲ ಮಾಡಿಕೊಟ್ಟಿದ್ದಾರೆ ಎಂದರು.
ರೈತರಿಗೆ ಅನುಕೂಲಕರವಾದಂತ ಕಾಯ್ದೆಗಳಿಗೆ ಕೇಂದ್ರ ಸರ್ಕಾರ ತಿದ್ದುಪಡಿ ತಂದಿದೆ. ಆದರೆ, ಇದನ್ನು ತಪ್ಪಾಗಿ ಅರ್ಥೈಸುವ ಮೂಲಕ ರೈತರನ್ನು ದಾರಿ ತಪ್ಪಿಸುವ ಕೆಲಸವನ್ನು ವಿರೋಧ ಪಕ್ಷಗಳು ಮಾಡುತ್ತಿವೆ. ಪ್ರಧಾನ ಮಂತ್ರಿ ಕಿಸನ್ ಸಮ್ಮಾನ್ ಯೋಜನೆ, ಜನ್ ಜೀವನ್ ಯೋಜನೆ ಸೇರಿದಂತೆ ಕೇಂದ್ರ ಸರ್ಕಾರ ಜನರಿಗೆ ಅನುಕೂಲಕಾರಿಯಾದಂತ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಧರಣಿ ನಿರತ ರೈತರು ಪ್ರಧಾನಿಯವರ ಕಾರ್ಯಕ್ರಮಗಳನ್ನು ಅರ್ಥ ಮಾಡಿಕೊಂಡು, ಧರಣಿ ನಿಲ್ಲಿಸಿ ಮಾತುಕತೆ ಮೂಲಕ ಬಗೆ ಹರಿಸಿಕೊಳ್ಳುವಂತೆ ಮನವಿ ಮಾಡಿದರು.
ಬರಗಾಲ, ಅತಿವೃಷ್ಠಿ, ಕೋವಿಡ್ ನಂತ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸಿದ್ದೇವೆ. ಇದರ ಮಧ್ಯೆಯೂ ಬಜೆಟ್ ನಲ್ಲಿ ಗುರಿಯನ್ನು ತಲುಪುವ ಕೆಲಸ ಮಾಡುತ್ತೇವೆ ಎಂದರು.