ಬೆಂಗಳೂರು: ಬ್ರಿಟನ್‍ನ ರೂಪಾಂತರಗೊಂಡ ಸೋಂಕು ರಾಜ್ಯದಲ್ಲಿ ಕಾಣಿಸಿಕೊಂಡಿದ್ದರೂ ಮತ್ತೆ ಲಾಕ್‍ಡೌನ್ ಅಥವಾ ಸೀಲ್‍ಡೌನ್ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನವರಿಯಲ್ಲಿ ಕೋವಿಡ್-19 ಲಸಿಕೆ ಲಭ್ಯವಾಗಲಿದ್ದು, ಜನರು ಆತಂಕಪಡುವ ಅಗತ್ಯವಿಲ್ಲ. ಇದು 2ನೇ ರೂಪಾಂತರಗೊಂಡ ಸೋಂಕು ಆಗಿರುವುದರಿಂದ ಅಷ್ಟೊಂದು ಪರಿಣಾಮ ಬೀರುವುದಿಲ್ಲ. ಹೀಗಾಗಿ ರಾಜ್ಯದಲ್ಲಿ ಪುನಃ ಲಾಕ್‍ಡೌನ್ ಅಥವಾ ಸೀಲ್‍ಡೌನ್ ಮಾಡುವುದಿಲ್ಲ. ಈಗಾಗಲೇ ನಾವು ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುವುದನ್ನು ತಡೆಗಟ್ಟಲು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ. ಸಾರ್ವಜನಿಕರು ಅನಗತ್ಯವಾಗಿ ವದಂತಿಗಳಿಗೆ ಕಿವಿಗೊಡಬಾರದು. ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕೆಂದು ಮನವಿ ಮಾಡಿದರು.
ಈಗಾಗಲೇ ನಿಗದಿಯಾಗಿರುವಂತೆ ಜ.1ರಿಂದ 10ನೇ ಮತ್ತು ದ್ವಿತೀಯ ಪಿಯುಸಿ ತರಗತಿಗಳು ಆರಂಭವಾಗಲಿವೆ. 6 ಮತ್ತು 9ನೇ ತರಗತಿಗೆ ವಿದ್ಯಾಗಮ ತರಗತಿಗಳು ಕೂಡ ಪ್ರಾರಂಭವಾಗಲಿವೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.



