ದಾವಣಗೆರೆ : ಜಿಲ್ಲೆಯಲ್ಲಿ ಇಂದು ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ನಡೆದಿದ್ದು, ಶೇ.85.36 ಮತದಾನವಾಗಿದೆ. ಎರಡನೇ ಹಂತದಲ್ಲಿ ಚನ್ನಗಿರಿ, ಹರಿಹರ ಮತ್ತು ನ್ಯಾಮತಿ ತಾಲ್ಲೂಕು ವ್ಯಾಪ್ತಿಯ 101 ಗ್ರಾ.ಪಂ ಗಳ 586 ಮತಗಟ್ಟೆಗಳಲ್ಲಿ ನಡೆದ ಮತದಾನ ಶಾಂತಿಯುತವಾಗಿ ನಡೆದಿದ್ದು, ಮಂದಗತಿಯಲ್ಲಿ ಆರಂಭವಾದ ಮತದಾನ ಮಧ್ಯಾಹ್ನದ ಹೊತ್ತಿಗೆ ಚುರುಕು ಪಡೆದುಕೊಂಡಿತ್ತು.
ಬೆಳಿಗ್ಗೆ 9 ಗಂಟೆ ವೇಳೆಗೆ ಶೇ.5.41 ಮತದಾನವಾದರೆ 11 ಗಂಟೆಗೆ ಶೇ.18.38 ಮತದಾನವಾಗಿತ್ತು. ಮಧ್ಯಾಹ್ನ 1 ಗಂಟೆಗೆ ಶೇ.42.62 ಮತದಾನವಾಗಿದ್ದರೆ, 3 ಗಂಟೆಗೆ ಶೇ.63.77 ಮತದಾನವಾಗಿತ್ತು. ಸಂಜೆ 5 ಗಂಟೆ ವೇಳೆಗೆ ಶೇ.85.36 ಮತದಾನವಾಗಿದೆ.
ಬೆಳಿಗ್ಗೆ 9 ಗಂಟೆ ಹೊತ್ತಿಗೆ ನ್ಯಾಮತಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಶೇ.8.03 ಮತದಾನವಾಗಿದ್ದರೆ, ಚನ್ನಗಿರಿಯಲ್ಲಿ ಕಡಿಮೆ ಶೇ.4.05 ರಷ್ಟು ಮತದಾನವಾಗಿತ್ತು. 11 ಗಂಟೆ ವೇಳೆಗೆ ಚನ್ನಗಿರಿಯಲ್ಲಿ ಶೇ.18.05, ಹರಿಹರ ಶೇ.18.01 ಇದ್ದು ನ್ಯಾಮತಿಯಲ್ಲಿ ಶೇ.19.0 ಮತದಾನವಾಗಿತ್ತು. ಮಧ್ಯಾಹ್ನ 1 ಗಂಟೆ ವೇಳೆಗೆ ಚನ್ನಗಿರಿಯಲ್ಲಿ ಚುರುಕುಗೊಂಡ ಮತದಾನ ಶೇ.44.06 ಕ್ಕೆ ತಲುಪಿದರೆ ಹರಿಹರದಲ್ಲಿ ಶೇ.42.60 ರಷ್ಟಿತ್ತು. ಹಾಗೂ ನ್ಯಾಮತಿಯಲ್ಲಿ 41.20 ರಷ್ಟು
ಮಧ್ಯಾಹ್ನ 3 ಗಂಟೆಗೆ ಚನ್ನಗಿರಿಯಲ್ಲಿ ಮತದಾನ ಪ್ರಮಾಣ ಶೇ.63.09 ರಷ್ಟಿದ್ದರೆ ಹರಿಹರದಲ್ಲಿ ಶೇ.61.5 ಮತದಾನ ಆಗಿತ್ತು ಹಾಗೂ ನ್ಯಾಮತಿಯಲ್ಲಿ ಶೇ.66.72 ರಷ್ಟಿತ್ತು. ಸಂಜೆ 5 ಗಂಟೆ ವೇಳೆಗೆ ಚನ್ನಗಿರಿಯಲ್ಲಿ ಶೇ.83.00 ಮತದಾನವಾದರೆ ಹರಿಹರದಲ್ಲಿ ಶೇ.87.08 ಮತ್ತು ನ್ಯಾಮತಿಯಲ್ಲಿ ಶೇ.86.01 ಮತದಾನವಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ಶೇ.85.36 ಮತದಾನವಾಗಿದೆ.
ಮತಕೇಂದ್ರಗಳಲ್ಲಿ ಕೋವಿಡ್ ನಿಯಮಪಾಲನಎಲ್ಲ ಮತಗಟ್ಟೆಗಳಲ್ಲಿ ಕೋವಿಡ್ ನಿಯಂತ್ರಣ ಹಿನ್ನಲೆ ಮತದಾರರಿಗೆ ಸ್ಯಾನಿಟೈಸರ್ ನೀಡಲು, ಥರ್ಮಲ್ ಸ್ಕ್ಯಾನರ್‍ನಿಂದ ಪರೀಕ್ಷಿಸಲು ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ವಯಸ್ಸಾದವರು ಮತ್ತು ವಿಕಲಚೇತನ ಮತದಾರರ ಅನುಕೂಲಕ್ಕೆ ವ್ಹೀಲ್‍ಚೇರ್ ವ್ಯವಸ್ಥೆ ಮಾಡಲಾಗಿತ್ತು. ಹಾಗೂ ಪೊಲೀಸ್ ಸಿಬ್ಬಂದಿ ಮತದಾರರಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚಿಸುತ್ತಿದ್ದರು. ಹಲವು ಮತಕೇಂದ್ರಗಳಲ್ಲಿ ಮೊದಲ ಬಾರಿಗೆ ಮತ ನೀಡಿದ ಯುವ ಮತದಾರರು ತಮ್ಮ ಮತ ಚಲಾಯಿಸಿ ಸಂಭ್ರಮಿಸಿದುದು ಕಂಡುಬಂದಿತು.



