ಬೆಂಗಳೂರು: ರಾಜ್ಯದಲ್ಲಿ ಸದ್ಯಕ್ಕೆ ರಾತ್ರಿ ಕರ್ಫ್ಯೂ ವಿಧಿಸುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ತಮ್ಮ ನಿವಾಸ ಕಾವೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ವರ್ಷ ಹೊಸ ವರ್ಷ ಆಚರಣೆ ಇಲ್ಲ. ಹೊಸ ವರ್ಷ ಆಚರಣೆ ಮಾಡಲು ಅವಕಾಶ ನೀಡುವುದಿಲ್ಲ ಎಂದರು. ಇನ್ನು ಕೊರೊನಾ ವೈರಸ್ ರೂಪಾಂತರಗೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇಡೀ ರಾಜ್ಯ ಮತ್ತು ದೇಶದ ಜನರನ್ನು ಇದು ಆತಂಕಕ್ಕೀಡು ಮಾಡಿದೆ. ಚೆನ್ನೈಗೆ ಬಂದಿರುವ ವ್ಯಕ್ತಿಯಲ್ಲಿ ಕಾಣಿಸಿಕೊಂಡಿದೆ. ಎಷ್ಟು ಕಟ್ಟೆಚ್ಚರ ವಹಿಸಿದರೂ ಕಡಿಮೆಯೇ ಎಂದರು.
ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ವೈರಸ್ ಹರಡದಂತೆ ಬೇಕಿರುವ ಎಚ್ಚರಿಕೆ ವಹಿಸುತ್ತೇವೆ. ಯಾರೇ ಹೊರಗಡೆಯಿಂದ ಬಂದರೂ ವಿಮಾನ ನಿಲ್ದಾಣದಲ್ಲಿ ತಪಾಸಣೆ ಮಾಡಲಾಗುವುದು. ದೇಶದಾದ್ಯಂತ ಈಗಾಗಲೇ ಎಚ್ಚರಿಕೆ ವಹಿಸಲಾಗಿದೆ. ಕೇಂದ್ರ ಸರ್ಕಾರ ಎಚ್ಚರಿಕೆಯಿಂದ ಇರುವಂತೆ ತಿಳಿಸಿದ್ದಾರೆ ಎಂದರು.



