ದಾವಣಗೆರೆ: ತಾಲ್ಲೂಕಿನ ಆನಗೋಡು ಹೋಬಳಿಯ ಹೆಬ್ಬಾಳು ಗ್ರಾಮ ಪಂಚಾಯಿತಿಯಲ್ಲಿ ಮತಗಟ್ಟೆ ಸಂಖ್ಯೆ ಅದಲು-ಬದಲಾಗಿದ್ದರಿಂದ ಗೊಂದಲ ಉಂಟಾಗಿತ್ತು. ಹೀಗಾಗಿ ಮತದಾನವನ್ನು ಮುಂದೂಡಲಾಗಿದೆ.
ಹೆಬ್ಬಾಳು-1 ಮತ್ತು 2 ವಾರ್ಡ್‌ಗಳಲ್ಲಿ ಒಟ್ಟು 6 ಕ್ಷೇತ್ರದಲ್ಲಿ 12 ಮಂದಿ ಸ್ಪರ್ಧಿಸಿದ್ದರು. ಈ 12 ಮಂದಿ ಈಗಾಗಲೇ ಪ್ರಚಾರ ಕೈಗೊಂಡಿದ್ದರು. ಮತಗಟ್ಟೆ ಅದಲು-ಬದಲು ಬಗ್ಗೆ ಗ್ರಾಮಸ್ಥರು ಚುನಾವಣಾಧಿಕಾರಿಗೆ ದೂರು ನೀಡಿದರು.
ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್, ತಹಸಿಲ್ದಾರ್ ಗಿರೀಶ್, ಸಹಾಯಕ ಕೃಷಿ ನಿರ್ದೇಶಕ ರೇವಣಸಿದ್ದಪ್ಪ ದಾಖಲೆ ಪರಿಶೀಲನೆ ನಡೆಸಿದರು. ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಎಸ್ಪಿ ಹನುಮಂತರಾಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಎಲ್ಲ ದಾಖಲೆಗಳನ್ನು ಪರಿಶೀಲಿಸಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸುತ್ತೇವೆ. ಅವರು ಯಾವಾಗ ಚುನಾವಣೆ ನಡೆಸಬೇಕು ಎಂದು ನಿರ್ಧಾರ ಕೈಗೊಳ್ಳುತ್ತಾರೆ ಎಂದು ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್ ಹೇಳಿದ್ದಾರೆ.
ಹೆಬ್ಬಾಳು ವಾರ್ಡ್ 1ರಲ್ಲಿ ( ಮತಗಟ್ಟೆ 108) 807 ಮತದಾರರಿದ್ದಾರೆ. ವಾರ್ಡ್ 2ರಲ್ಲಿ (ಮತಗಟ್ಟೆ 109) 917 ಮತದಾರರಿದ್ದಾರೆ. ಇನ್ನು ಹೆಬ್ಬಾಳು ಪಂಚಾಯಿತಿಯ ಉಳಿದ ಐದು ವಾರ್ಡ್ ಗಳಿಗೆ ಮತದಾನ ನಡೆದಿದೆ.



