ಹಗರಿಬೊಮ್ಮನಹಳ್ಳಿ: ಬಳ್ಳಾರಿ ಜಿಲ್ಲೆ ವಿಭಜನೆ ಬೆಂಬಲಿಸಿ ಪಶ್ಚಿಮ ತಾಲೂಕು ಸಾರ್ವಜನಿಕರು ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಪತ್ರ ಚಳವಳಿ ನಡೆಸಲಾಗುವುದು ಎಂದು ರಾಜ್ಯ ಕಾಂಗ್ರೆಸ್ ಮಾಧ್ಯಮ ವಕ್ತಾರ ಪತ್ರೇಶ್ ಹಿರೇಮಠ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಬಳ್ಳಾರಿ ಜಿಲ್ಲಾ ಕೇಂದ್ರಕ್ಕೆ ತೆರಳಲು ಪಶ್ಚಿಮ ತಾಲೂಕುಗಳ ಜನರ ಸಮಸ್ಯೆಯಾಗಿತ್ತು. ಇದೀಗ ಬಳ್ಳಾರಿ ಜಿಲ್ಲೆ ವಿಭಜನೆ ಸೂಕ್ತವಾಗಿದ್ದು ಕೊಟ್ಟೂರು ಕೂಡ್ಲಿಗಿ ಹಗರಿಬೊಮ್ಮನಹಳ್ಳಿ ಹಡಗಲಿ ಹರಪನಹಳ್ಳಿ ತಾಲೂಕುಗಳ ಜನತೆ, ಮತ್ತು ಸಂಘಸಂಸ್ಥೆಗಳು ವಿಭಜನೆ ಬೆಂಬಲಿಸಿ ಪತ್ರ ಚಳವಳಿ ನಡೆಸಲಿದ್ದೇವೆ ಎಂದರು.
ಬಳ್ಳಾರಿ ಜಿಲ್ಲೆಯ ಅಖಂಡ ತಾಲೂಕುಗಳ ಅಭಿವೃದ್ಧಿ ಮಾಡದಿರುವುದೇ ವಿಭಜನೆಗೆ ಕಾರಣವಾಗಿದ್ದು ಅಖಂಡತೆ ಎಲ್ಲಾ ಕ್ಷೇತ್ರಗಳಲ್ಲೂ ಇದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಪಶ್ಚಿಮ ತಾಲೂಕುಗಳ ಜನರ ನಿರಂತರ ಹೋರಾಟ ಹಾಗೂ ಸಚಿವ ಆನಂದ್ ಸಿಂಗ್ ಪ್ರಬಲ ಇಚ್ಛಾಶಕ್ತಿಯಿಂದ ಜಿಲ್ಲೆ ವಿಭಜನೆಗೊಳಿಸಿ ಅಧಿಸೂಚನೆ ಹೊರಡಿಸಿ ಆಕ್ಷೇಪಣೆಗೆ ಸಮಯಾವಕಾಶ ನೀಡಿದ್ದು ಇದನ್ನು ಬೆಂಬಲಿಸಿ ರಾಜ್ಯ ಕಂದಾಯ ಇಲಾಖೆ ಅಪರ ಕಾರ್ಯದರ್ಶಿಗಳಿಗೆ ಪತ್ರ ಬರೆಯುವ ಚಳವಳಿ ನಡೆಸಲು ಪತ್ರೇಶ್ ಪಶ್ಚಿಮ ತಾಲೂಕುಗಳ ಜನರಲ್ಲಿ ಮನವಿ ಮಾಡಿದರು.
ರೈತರಿಗೆ, ಬಡವರಿಗೆ, ಕೂಲಿ ಕಾರ್ಮಿಕರಿಗೆ ಹಾಗೂ ಜನಸಾಮಾನ್ಯರೆಲ್ಲರಿಗೂ ತಮ್ಮ ಕೆಲಸ ಕಾರ್ಯಗಳಿಗೆ ಜಿಲ್ಲಾ ಕೇಂದ್ರ ತಲುಪುವುದು ಸದ್ಯದ ಪರಿಸ್ಥಿತಿಯಲ್ಲಿ ಕಷ್ಟಕರವಾಗಿತ್ತು. ಸುಮಾರು 200 ಕಿ.ಮೀ ದೂರ ಕ್ರಮಿಸಬೇಕಾಗಿತ್ತು. ಈ ನಿಟ್ಟಿನಲ್ಲಿ ಸರ್ಕಾರ ಬೇಡಿಕೆಗೆಯನ್ನು ಮನ್ನಿಸಿ ಹೊಸ ಜಿಲ್ಲೆ ಉದಯಕ್ಕೆ ನಾಂದಿ ಹಾಡಿದೆ ಎಂದು ತಿಳಿಸಿದರು.



