ದಾವಣಗೆರೆ: ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರಿಗೆ ಕೋತಿಯೊಂದು ಭಾರೀ ಕಿರಿಕ್ ಉಂಟು ಮಾಡಿ ಸುದ್ದಿಯಾಗಿದೆ. ಹೊನ್ನಾಳಿ ತಾಲೂಕು ಕಚೇರಿ ಎದುರು ಕೋತಿ ಹಾವಳಿ ಹೆಚ್ಚಾಗಿದ್ದು, ಈ ಹಾವಳಿ ರೇಣುಕಾಚಾರ್ಯ ಅವರಿಗೂ ಬಿಸಿ ಮುಟ್ಟಿಸಿತು. 20ಕ್ಕೂ ಹೆಚ್ಚು ಜನರ ಮೇಲೆ ದಾಳಿ ಮಾಡಿರುವ ಈ ಕೋತಿಗಳು, ಇಂದು ಶಾಸಕರ ಮೇಲೆ ಎರಗಲು ಮುಂದಾಗಿತ್ತು.ಅದೃಷ್ಟವಶಾತ್ ರೇಣುಕಾಚಾರ್ಯ ಅವರು ತಪ್ಪಿಸಿಕೊಂಡಿದ್ದಾರೆ.
ಕೆಲ ತಿಂಗಳ ಹಿಂದೆ ಹೊನ್ನಾಳಿಯ ಸಂತೆಮೈದಾನದಲ್ಲಿ ನಡೆದಿದ್ದ ಟಗರು ಕಾಳಗದ ಉದ್ಘಾಟನೆ ಮಾಡಿದ್ದ ಶಾಸಕ ರೇಣುಕಾಚಾರ್ಯ ಅವರ ಮೈಮೇಲೆ ಟಗರು ತಿವಿದಿತ್ತು. ಇದಕ್ಕೂ ಮೊದಲು ಹೋರಿಯಿಂದಲೂ ಸ್ವಲ್ಪದಲ್ಲಿಯೇ ರೇಣುಕಾಚಾರ್ಯ ಅವರು ಬಚಾವಾಗಿದ್ದರು.ಇದೀಗ ಕೋತಿಯಿಂದಲೂ ತಪ್ಪಿಸಿಕೊಂಡಿದ್ದಾರೆ.
ಹೊನ್ನಾಳಿಯಲ್ಲಿ ಕೋತಿ ಕಾಟ ಹೆಚ್ಚಾಗಿದ್ದು ಜನರು ಭಯಭೀತರಾಗುವ ಸ್ಥಿತಿ ಬಂದಿದೆ. ಈಗ ಶಾಸಕರ ಮೇಲಿನ ದಾಳಿ ನಂತರ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಇದಾಗಲೇ ಅರಣ್ಯ ಅಧಿಕಾರಿಗಳು ಅವುಗಳನ್ನು ಹಿಡಿಯಲು ವಿಫಲವಾಗಿದ್ದಾರೆ. ಬಲೆ ತೆಗೆದುಕೊಂಡು ಬಂದು ಹಿಡಿದರೂ ಸಾಧ್ಯವಾಗುತ್ತಿಲ್ಲ. ಕೋತಿಗೆ ಅರವಳಿಕೆ ಮದ್ದು ನೀಡಿದರೆ ಮಾತ್ರ ಸೇರೆ ಹಿಡಿಯಲು ಸಾಧ್ಯ ಎನ್ನಲಾಗುತ್ತಿದೆ.



