ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರ ಎಷ್ಟು ಬೇಗ ತೊಲಗುತ್ತೋ ಅಷ್ಟು ಒಳ್ಳೆಯದು. ಪಕ್ಷ ಬಿಟ್ಟು ಹೋದವರ ವಿಚಾರದಲ್ಲಿ ನಾನು ಪಾರ್ಟಿನೂ ಅಲ್ಲ, ಸಾಕ್ಷಿಯೂ ಅಲ್ಲ. ನಾನ್ಯಾಕೆ ಅವರ ಪರ ಮಾತಾಡಲಿ ಎಂದು ವಿಪಕ್ಷ ನಾಯಕೆ ಸಿದ್ದರಾಮಯ್ಯ ಕಿಡಿಕಾರಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ನಾಯಕತ್ವ ಬದಲಾಗುತ್ತೋ ಇಲ್ಲವೋ ಗೊತ್ತಿಲ್ಲ. ಎಂಟಿಬಿ ನಾಗರಾಜ್, ಶಂಕರ್ ಅವರನ್ನೆಲ್ಲ ಮಂತ್ರಿ ಮಾಡಲಿ ಬಿಡಲಿ ನನಗೇನಾಬೇಕು. ವ್ಯಾಪಾರ ಮಾಡಿಕೊಂಡು ಹೋಗಿರೋರು ಅವರು. ಅವರು ಏನು ವ್ಯಾಪಾರ ಮಾಡ್ಕೊಂಡಿದ್ದಾರೋ ನನಗೇನು ಗೊತ್ತು ಎಂದರು.
ವೀರಶೈವ- ಲಿಂಗಾಯತ ಸಮುದಾಯವನ್ನು ಕೇಂದ್ರ ಸರ್ಕಾರದ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸುವ ವಿಷಯದ ಕುರಿತು ಮಾತನಾಡಿ, ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಶಿಫಾರಸು ಇಲ್ಲದೆ ಯಾವುದೇ ಸಮುದಾಯಕ್ಕೆ ಒಬಿಸಿ ಸ್ಥಾನಮಾನ ನೀಡಲು ಬರಲ್ಲ. ಹಿಂದುಳಿದ ಪಟ್ಟಿಗೆ ಸೇರಿಸುವಂತೆ ಶಿಫಾರಸು ಮಾಡಲು ಏನಾದರೊಂದು ಆಧಾರ ಬೇಕಲ್ಲ. ಯಾವ ವರದಿ ಇದೆ.ನಾನು ಯಾವುದೇ ಸಮುದಾಯದ ಪರವೂ ಇಲ್ಲ, ವಿರುದ್ಧವೂ ಇಲ್ಲ. ಆದರೆ, ಯಾವ್ಯಾವ ಸಮುದಾಯಕ್ಕೆ ಒಬಿಸಿ ಸ್ಥಾನಮಾನ ಪಡೆಯುವ ಅರ್ಹತೆ ಇದೆಯೋ, ಆ ಎಲ್ಲ ಸಮುದಾಯಗಳಿಗೂ ನೀಡಬೇಕು. ಈ ವಿಚಾರ ಗೊತ್ತಾಗಿದ್ದರಿಂದಲೇ ಸಚಿವ ಸಂಪುಟ ಕಾರ್ಯಸೂಚಿಯಿಂದ ವೀರಶೈವ ಲಿಂಗಾಯತ ಒಬಿಸಿ ಶಿಫಾರಸ್ಸು ಹಿಂಪಡೆದಿರಬೇಕೆಂದು ಎಂದು ಹೇಳಿದರು.



