ನವದೆಹಲಿ: ನಾವು ಅಧಿಕಾರಕ್ಕೆ ಬಂದರೆ ರೈತ-ವಿರೋಧಿ ಕಾನೂನುಗಳನ್ನು ರದ್ದುಗೊಳಿಸಲಾಗುವುದು ಎಂದು ಕಾಂಗ್ರೆಸ್ ಪಕ್ಷ ಹೇಳಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಆದ್ಯತೆ ಮೇರೆಗೆ ಮೂರು ರೈತ-ವಿರೋಧಿ ನೀತಿಗಳನ್ನು ರದ್ದುಗೊಳಿಸುತ್ತೇವೆ. ದೇಶಾದ್ಯಂತ ನಡೆಯತ್ತಿರುವ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿರುವ ಕಾಂಗ್ರೆಸ್, ರೈತ-ವಿರೋಧಿ ಕಾನೂನುಗಳನ್ನು ರದ್ದುಗೊಳಿಸುವುದಾಗಿ ಭರವಸೆ ನೀಡಿದೆ.
ನಮ್ಮ ಪಕ್ಷ ಆರಂಭದಿಂದಲೂ ಅದನ್ನು ವಿರೋಧಿಸುತ್ತಿದೆ. ದೇಶದಲ್ಲಿ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ, ಈ ಮೂರು ಕಾಯ್ದೆಗಳಿಂದ ರೈತರಿಗೆ ನಷ್ಟವಾಗುವುದನ್ನು ತಡೆಯಲು ರಾಜ್ಯ ಮಟ್ಟದಲ್ಲಿ ಹೊಸ ಕಾನೂನುಗಳನ್ನು ರಚಿಸಲಾಗುತ್ತಿದೆ ಎಂದು ಹೇಳಿದರು.
ಇನ್ನೊಂದೆಡೆ ಸತ್ಯದ ಪರವಾಗಿ ನಡೆದ ಯುದ್ಧವನ್ನು ಜಗತ್ತಿನಲ್ಲಿ ಯಾವುದೇ ಸರ್ಕಾರಗಳು ತಡೆಯುವುದಕ್ಕೆ ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿ ಕಾರಿದ್ದಾರೆ. ಕೃಷಿ ಸಂಬಂಧಿತ ಕಾಯ್ದೆ ವಿರುದ್ಧ ರೈತರ ಹೋರಾಟಕ್ಕೆ ಅವರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಸತ್ಯಕ್ಕಾಗಿ ನಡೆದ ಹೋರಾಟವನ್ನು ಯಾವುದೇ ಸರ್ಕಾರಗಳು ತಡೆಯುವುದಕ್ಕೆ ಸಾಧ್ಯವಿಲ್ಲ. ಇದು ಕೇವಲ ಆರಂಭವಷ್ಟೇ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸರ್ಕಾರವು ರೈತರ ಬೇಡಿಕೆಗಳನ್ನು ಮತ್ತು ಒಪ್ಪಿಕೊಳ್ಳಬೇಕು. ಕೃಷಿ ಸಂಬಂಧಿತ ಕಾಯ್ದೆಯನ್ನು ವಾಪಸ್ ಪಡೆದುಕೊಳ್ಳಬೇಕು ಎಂದು ‘IamWithFarmers’ ಹ್ಯಾಷ್ ಟ್ಯಾಗ್ ನೊಂದಿಗೆ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.



