ದಾವಣಗೆರೆ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ. ಸಂಪುಟ ರಚನೆ, ಪುನರ್ ರಚನೆ ಬಗ್ಗೆ ಶೀಘ್ರವೇ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ. ಸಂಪುಟ ವಿಸ್ತರಣೆ ಬಗ್ಗೆ ಯಾವುದೇ ಗೊಂದಲಗಳು ಇಲ್ಲ ಎಂದು ನಳೀನ್ ಕುಮಾರ್ ಕಟೀಲ್ ಹೇಳಿದರು.
ನಗರದ ಖಾಸಗಿ ಹೋಟೆಲ್ ನಲ್ಲಿ ರಾಜ್ಯ ಮಟ್ಟದ ಬಿಜೆಪಿ ಪ್ರಕೋಷ್ಠ ಸಂಚಾಲಕರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಈಗಾಗಲೇ ಮುಖ್ಯಮಂತ್ರಿ ಮತ್ತು ಕೇಂದ್ರದ ನಾಯಕರ ಜೊತೆ ಮಾತನಾಡಿದ್ದೇವೆ. ಸಂಪುಟ ರಚನೆಯೋ , ಪುನರ್ ರಚನೆಯೋ ಎಂಬುದನ್ನು ಕಾದು ನೋಡಿ. ನಾಯಕತ್ವದ ಬದಲಾವಣೆಯ ಬಗ್ಗೆ ಯಾವುದೇ ವಿಚಾರ ಇಲ್ಲ. ಮುಂದಿನ ಎರಡುವರೆ ವರ್ಷಗಳ ಕಾಲ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ.
ಸಿಎಂ ಭೇಟಿ ವಿಚಾರಕ್ಕೆ ಸಂಬಂಧ ಮಾತನಾಡಿ, ನಾವು ಸಹಜವಾಗಿ ಪ್ರತಿ 15 ದಿನಕ್ಕೊಮ್ಮೆ ಸಿಎಂ ಭೇಟಿಯಾಗುತ್ತೇವವೆ. ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ 500 ಕೋಟಿ ಮೀಸಲಿಡಲಾಗಿದೆ. ಆ ಸಮುದಾಯದ ಮುಖಂಡರು ಬೇಡಿಕೆ ಇಟ್ಟ ಹಿನ್ನಲೆಯಲ್ಲಿ ಸಿಎಂ ತೀರ್ಮಾನ ತೆಗೆದುಕೊಂಡಿದ್ದಾರೆ. ಮುಖ್ಯಮಂತ್ರಿ ಗಳು ಎಲ್ಲಾ ಸಮುದಾಯಕ್ಕೆ ನ್ಯಾಯ ಕೊಟ್ಟಿದ್ದಾರೆ ಎಂದರು.
ಸಂತೋಷ್ ಜೀ ನಮಗೆ ಹಿರಿಯರು, ಅವರ ಮಾರ್ಗದರ್ಶನಲ್ಲಿ ಕೆಲಸ ಮಾಡುತ್ತೇವೆ. ದಾವಣಗೆರೆಗೆ ಸಚಿವ ಸ್ಥಾನ ನೀಡುವುದರ ಬಗ್ಗೆ ಮಾತನಾಡಿ, ಭೌಗೋಳಿಕವಾಗಿ ನ್ಯಾಯ ಒದಗಿಸುವ ಕಲಸ ಮಾಡುತ್ತೇವೆ. ಸರ್ಕಾರ ನಡೆಸುವಾಗ ಎಲ್ಲಾ ಸಮಾಜವನ್ನು ಸರಿದೂಗಿಸಿಕೊಂಡು ಹೋಗಬೇಕಾಗುತ್ತದೆ ಎಂದರು.
ಸಂಸದ ಜಿ ಎಂ ಸಿದ್ದೇಶ್ವರ್ ಮಾತನಾಡಿ, ಪ್ರಕೋಷ್ಠ ಎಂದ್ರೆ ಆಯಾ ಕ್ಷೇತ್ರದ ವಿಶೇಷ ಪರಿಣಿತರನ್ನು ಬಿಜೆಪಿ ಪಕ್ಷ ಆಯ್ಕೆ ಮಾಡಿ, ಆಯಾ ಕ್ಷೇತ್ರಗಳಲ್ಲೇ ಹೆಚ್ಚು ಜನರನ್ನು ತಲುಪುದಕ್ಕೆ ಸಾಧ್ಯವಾಗುತ್ತದೆ. ಬಿಜೆಪಿ ಪ್ರಪಂಚದಲ್ಲೇ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಪಕ್ಷವಾಗಿದೆ ಎಂದರು.
ಪ್ರಧಾನ ಮಂತ್ರಿ ಏಳನೇ ವರ್ಷ ಸಂಸತ್ತಿನಲ್ಲಿ ಅಧಿಕಾರ ನಡೆಸುತ್ತಿದ್ದಾರೆ. ಅವರ ಒಂದೊಂದು ಯೋಜನೆಯು ಬಡವರ ಕಲ್ಯಾಣಕ್ಕಾಗಿ ಮಾಡಿದಂತವು. ದಿನಕ್ಕೆ 18 ಗಂಟೆ ಕೆಲಸಮಾಡುವ ಏಕೈಕ ವ್ಯಕ್ತಿ ನರೇಂದ್ರ ಮೋದಿ..ಕಾರ್ಯಕರ್ತರೇ ಬಿಜೆಪಿ ಶಕ್ತಿ. ಗ್ರಾಮ ಪಂಚಾಯತಿ ಮುಂಬರುವ ತಾಲ್ಲೂಕ್ ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ಹೆಚ್ಚಿನ ಸೀಟು ಗೆಲ್ಲಿಸಬೇಕಿದೆ.ಕಾಂಗ್ರೆಸ್ ನವರು ಇನ್ನು ಗರೀಬ್ ಹಟಾವೋ ಹಿಡಿದುಕೊಂಡಿದ್ದಾರೆ. ನಾವು ಅಂತ ಎಷ್ಟೋ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ ಎಂದರು.