ಬೆಂಗಳೂರು : ಸರ್ಕಾರ ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆಗೆ ಮುಂದಾಗುತ್ತಿದ್ದಂತೆ ವೀರಶೈವ ಲಿಂಗಾಯತ ಅಭಿವೃದ್ಧಿ ಮಂಡಳಿ ಸ್ಥಾಪಿಸುವಂತೆ ಡಿಸಿಎಂ ಲಕ್ಷ್ಮಣ್ ಸವದಿ, ಸಚಿವರಾದ ಸೋಮಣ್ಣ, ಬಿ.ಸಿ. ಪಾಟೀಲ್, ಸೇಡಂ ಶಾಸಕ ರಾಜಶೇಖರ್ ಪಾಟೀಲ್ ತೆಲ್ಕೂರ್ ಅವರು ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.
ಮರಾಠಿ ಅಭಿವೃದ್ಧಿ ನಿಗಮವನ್ನು ಸ್ಥಾಪಿಸುವುದರಿಂದ ಸಾಮಾಜಿಕ ಸಮಾನತೆಗೆ ಅವಕಾಶವಾಗುತ್ತದೆ. ಈ ಸಮುದಾಯದಲ್ಲಿ ಅತ್ಯಂತ ಬಡವರು ಮತ್ತು ಹಿಂದುಳಿದವರಿದ್ದಾರೆ ಅವರ ಸಮಗ್ರ ಅಭಿವೃದ್ಧಿಗೆ ಈ ನಿಗಮದ ಸ್ಥಾಪನೆ ಸೂಕ್ತ ಎಂದು ಉಪಮುಖ್ಯಮಂತ್ರಿಗಳು ಮತ್ತು ಸಾರಿಗೆ ಸಚಿವರಾದ ಶ್ರೀ ಲಕ್ಷ್ಮಣ್ ಸವದಿ ಹೇಳಿದರು.
ಸನ್ಮಾನ್ಯ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮರಾಠಿ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲು ಕೈಗೊಂಡ ನಿರ್ಧಾರವನ್ನು ಸ್ವಾಗತಿಸಿದ ಅವರು ಮರಾಠ ಎಂದಾಕ್ಷಣ ಕೇವಲ ಭಾಷೆಯ ಆಧಾರದಲ್ಲಿ ಪರಿಗಣಿಸುವುದು ಸರಿಯಲ್ಲ. ಇದು ಸಮುದಾಯದ ಅಭಿವೃದ್ಧಿಯ ವಿಷಯವಾಗಿರುವುದರಿಂದ ಮತ್ತು ಈ ನಿಗಮವನ್ನು ಸ್ಥಾಪಿಸಬೇಕೆಂದು ಹಲವು ವರ್ಷಗಳಿಂದ ಬೇಡಿಕೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಅತ್ಯಂತ ಸಮರ್ಪಕವಾಗಿದೆ ಎಂದರು.
ವೀರಶೈವ ಲಿಂಗಾಯತರ ಸಮುದಾಯದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಬಡವರು ಮತ್ತು ಹಿಂದುಳಿದವರು ಸೇರಿರುವುದರಿಂದ ಅವರಿಗೆ ಅನುಕೂಲ ಕಲ್ಪಿಸುವಂತಾಗಲು ಪ್ರತ್ಯೇಕ ವೀರಶೈವ ಲಿಂಗಾಯತರ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಬೇಕೆಂದು ಉಪ ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರಾದ ಶ್ರೀ ಲಕ್ಷ್ಮಣ ಸವದಿ ಅವರು ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮನವಿ ಮಾಡಿಕೊಂಡರು.
ಮಂಡಳಿಯನ್ನು ಸ್ಥಾಪಿಸುವುದರಿಂದ ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಈ ಸಮುದಾಯದ ಬಡವರಿಗೆ ಮತ್ತು ಹಿಂದುಳಿದವರಿಗೆ ಅನುಕೂಲ ಸಿಗುವಂತಾಗಿ ಸಾಮಾಜಿಕ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಶ್ರೀ ಸವದಿ ಅವರು ಮನವರಿಕೆ ಮಾಡಿಕೊಟ್ಟರು.



