ಶಿವಮೊಗ್ಗ: ದೀಪಾವಳಿ ಗಿಫ್ಟ್ ಆಗಿ ಸರ್ಕಾರ ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರ ಗೌರವಧನ ಬಿಡುಗಡೆ ಮಾಡಿದ್ದು, ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿ ಪರವಾಗಿ ಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವರಿಗೆ ಅಭಿನಂದನೆಗಳು ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತಿಥಿ ಉಪನ್ಯಾಸಕರಿಗೆ ಮೂರು ತಿಂಗಳ ಗೌರವಧನ ಬರಬೇಕಿತ್ತು. ಯಡಿಯೂರಪ್ಪ ಅವರು 5 ತಿಂಗಳ ವೇತನ ಮಂಜೂರು ಮಾಡುವ ಮೂಲಕ ದೀಪಾವಳಿ ಗಿಫ್ಟ್ ನೀಡಿದ್ಧಾರೆ. ಒಟ್ಟು 14,447 ಅತಿಥಿ ಉಪನ್ಯಾಸಕರಿಗೆ ಲಾಕ್‌ಡೌನ್ ಅವಧಿಯ 5 ತಿಂಗಳ ಗೌರವಧನವಾದ 85.92 ಕೋಟಿ ಬಿಡುಗಡೆ ಮಾಡಿದ್ದಾರೆ ಎಂದು ತಿಳಿಸಿದರು.
ಕೊರೊನಾ ಲಾಕ್ ಡೌನ್ ಅವಧಿಯಲ್ಲಿ ಕಾಲೇಜುಗಳು ನಡೆದಿರಲಿಲ್ಲ. ಇದರಿಂದ ಅತಿಥಿ ಉಪನ್ಯಾಸಕರು ಸಂಕಷ್ಟ ಅನುಭವಿಸಿದ್ದರು. ಸೆಪ್ಟಂಬರ್‌ನಲ್ಲಿ ನಡೆದ ವಿಧಾನಮಂಡಲದ ಅಧಿವೇಶದಲ್ಲಿ ವೇತನ ಮುಖ್ಯಮಂತ್ರಿ ಅವರು ವೇತನ ಬಿಡುಗಡೆ ಮಾಡುವ ಭರವಸೆ ನೀಡಿದ್ದರು. ಈಗ ನೀಡಿದ ಭರವಸೆಯಂತೆ ವೇತನ ನೀಡಿದ್ದಾರೆ ಎಂದರು.
ಈ ವೇಳೆ ಸಮಿತಿಯ ರಾಜ್ಯ ಕಾರ್ಯಾಧ್ಯಕ್ಷ ಸಿ.ಟಿ.ಪಾಟೀಲ್, ಪ್ರಧಾನ ಕಾರ್ಯದರ್ಶಿ ಅರುಣ್, ಉಪಾಧ್ಯಕ್ಷೆ ಡಾ.ಹೇಮಲತಾ, ಕಾರ್ಯದರ್ಶಿ ವಿಶ್ವ ಕುಮಾರ್, ಸರೈಯಾ, ಪ್ರವೀಣ್ ಕುಮಾರ್, ಚಂದ್ರಪ್ಪ, ನಾಗರಾಜ್ ಉಪಸ್ಥಿತರಿದ್ದರು.