ಡಿವಿಜಿ ಸುದ್ದಿ, ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ಬಯಲುಸೀಮೆ ಪ್ರದೇಶಗಳಿಗೆ ಭದ್ರಾ ಜಲಾಶಯದಿಂದ 1281.80 ಕೋಟಿ ವೆಚ್ಚದಲ್ಲಿ197 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರು, ತರೀಕೆರೆ ಹಾಗೂ ಚಿಕ್ಕಮಗಳೂರು, ಹಾಸನ ಜಿಲ್ಲೆಯ ಅರಸೀಕೆರೆ ಸೇರಿದಂತೆ ಒಟ್ಟು 197 ಕೆರೆಗಳನ್ನು ತುಂಬಿಸಲು 1281.80 ಕೋಟಿ ರೂ. ಯೋಜನೆಗೆ ಸಂಪುಟ ಸಭೆ ಅನುಮೋದನೆ ನೀಡಿದೆ.
ಈ ಯೋಜನೆಯು ಮೂರು ಹಂತಗಳಲ್ಲಿ ಅನುಷ್ಠಾನಗೊಳ್ಳಲಿದ್ದು, ಮೊದಲನೇ ಹಂತದ ಯೋಜನೆಗೆ 406.50 ಕೋಟಿ, 2ನೇ ಹಂತದ ಯೋಜನೆಗೆ 298.60 ಕೋಟಿ ಹಾಗೂ 3ನೇ ಹಂತದ ಯೋಜನೆಯಲ್ಲಿ 476.07 ಕೋಟಿ ವೆಚ್ಚವಾಗಲಿದೆ. ತರೀಕೆರೆ ತಾಲ್ಲೂಕಿನ 31, ಕಡೂರಿನ 114, ಚಿಕ್ಕಮಗಳೂರಿನ 48, ಹಾಗೂ ಹಾಸನ ಜಿಲ್ಲೆಯ ಅರಸೀಕೆರೆಯ 4 ಸೇರಿದಂತೆ ಒಟ್ಟು 197 ಕೆರೆಗಳನ್ನು ತುಂಬಿಸಲು1281.80 ಕೋಟಿ ವೆಚ್ಚ ಮಾಡಲಾಗುತ್ತದೆ. ಇದಕ್ಕಾಗಿ ಭದ್ರಾ ಜಲಾಶಯದಿಂದ 1.45 ಟಿಎಂಸಿ ನೀರು ನೀಡಲು ಒಪ್ಪಿಗೆ ಸಿಕ್ಕಿದೆ.



