ಡಿವಿಜಿ ಸುದ್ದಿ, ಧಾರವಾಡ: ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ನವೆಂಬರ್ 23ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆಯಾಗಿದೆ. ವಿನಯ್ ಕುಲಕರ್ಣಿಗೆ ಮತ್ತೆ ಶಾಕ್ ಎದುರಾಗಿದ್ದು, ಮಾಜಿ ಸಚಿವರು ಜೈಲಿನಲ್ಲಿಯೇ ಈ ಬಾರಿಯ ದೀಪಾವಳಿ ಆಚರಿಸುವಂತಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನಗರದ ಸೆಷನ್ಸ್ ಕೋರ್ಟ್ ನಲ್ಲಿ ವಿಚಾರಣೆ ನಡೆಸಲಾಗಿದ್ದು, ನವೆಂಬರ್ 23ರವರೆಗೆ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ. ಕಳೆದೆರಡು ದಿನಗಳಿಂದ ತಮ್ಮ ಕಸ್ಟಡಿಯಲ್ಲಿರುವ ಕುಲಕರ್ಣಿಯನ್ನ ಸಿಬಿಐ ಅಧಿಕಾರಿಗಳು ದಾಖಲೆಗಳ ಮೂಲಕ ವಿಚಾರಣೆ ನಡೆಸುತ್ತಿದ್ಧಾರೆ.
ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಸಾಕ್ಷಿ ನಾಶ, ಸುಳ್ಳು ದಾಖಲೆ ಸೃಷ್ಟಿ, ಪೊಲೀಸ್ ಇಲಾಖೆ ಮೇಲೆ ಒತ್ತಡ, ಹಂತಕರಿಗೆ ಆಶ್ರಯ, ಕೊಲೆಯಾದ ಯೋಗೇಶ್ ಗೌಡರ ಪತ್ನಿಯನ್ನ ಪಕ್ಷಕ್ಕೆ ಕರೆತಂದಿದ್ದು. ಹೀಗೆ ಹಲವು ದಾಖಲೆ ಇಟ್ಟುಕೊಂಡು ಸಿಬಿಐ ವಿನಯ್ ಕುಲಕರ್ಣಿ ವಿಚಾರಣೆ ನಡೆಸುತ್ತಿದೆ.
ಮಾಜಿ ಸಚಿವ ಆಪ್ತ ಕಾರ್ಯದರ್ಶಿ ಸೋಮಲಿಂಗ ನ್ಯಾಮೇಗೌಡ, ಸಾಕ್ಷಿ ನಾಶಕ್ಕೆ ಸಹಕರಿಸಿದ ಸೋದರಮಾವ ಚಂದ್ರಶೇಖರ ಇಂಡಿ, ಯೋಗೀಶ್ ಗೌಡ ಪತ್ನಿ ಮಲ್ಲರನ್ನು ಕಾಂಗ್ರೆಸ್ಸಿಗೆ ಕರೆತಂದ ಕಾಂಗ್ರೆಸ್ ಮುಖಂಡ ನಾಗರಾಜ ಗೌರಿ ಹಾಗೂ ಮಲ್ಲಮ್ಮರನ್ನು ಕೂಡ ವಿನಯ್ ಕುಲಕರ್ಣಿ ಸಮ್ಮುಖದಲ್ಲೆ ಸಿಬಿಐ ತೀವ್ರ ವಿಚಾರಣೆಗೆ ಒಳಪಡಿಸಿತ್ತು.