ಡಿವಿಜಿ ಸುದ್ದಿ, ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹಾಗೂ ಮರಣ ಪ್ರಮಾಣ ಇಳಿಕೆಯಾಗಿದ್ದು, ಪರೀಕ್ಷಾ ಪ್ರಮಾಣ ಹೆಚ್ಚಳ ಮಾಡಲಾಗಿದೆ. ಇದರ ಜೊತೆ ರಾಜ್ಯದಲ್ಲಿ ಶೇ.27.3 ರಷ್ಟು ಜನರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್‍ನಿಂದ ಗುಣಮುಖರಾದವರು, ಸಕ್ರಿಯ ಸೋಂಕು ಹೊಂದಿದವರನ್ನು ಕೋವಿಡ್ ಸೋಂಕಿನ ಪ್ರಮಾಣದ ಅಂದಾಜಿಗೆ ಸಂಬಂಧಿಸಿದಂತೆ ಸಿರೋ ಸಮೀಕ್ಷೆಗೊಳಪಡಿಸಲಾಗಿತ್ತು. ಸೆಪ್ಟೆಂಬರ್ 3ರಿಂದ 16ರ ನಡುವಿನ ಅವಧಿಯಲ್ಲಿ ಮೊದಲ ಸುತ್ತಿನ ಸಮೀಕ್ಷೆ ನಡೆಯಲಿದೆ ಎಂದರು.

ರಾಜ್ಯದ 30 ಜಿಲ್ಲೆಗಳು ಸೇರಿದಂತೆ ಬಿಬಿಎಂಪಿಯ 8 ವಲಯಗಳಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಸಮೀಕ್ಷೆ ನಡೆಸಲಾಗಿತ್ತು. ಹಿಂದೆ ಹಾಗೂ ಸರ್ವೇ ಮಾಡುವ ಸಮಯದಲ್ಲಿ ಸೋಂಕಿಗೆ ಒಳಗಾದವರ ಒಟ್ಟು ಪ್ರಮಾಣ ಶೇ.27.3ರಷ್ಟಿದ್ದು, ಅಷ್ಟೇ ಪ್ರಮಾಣದ ಜನರಲ್ಲಿ ಆಯಂಟಿಬಾಡಿ ಸೃಷ್ಟಿಯಾಗಿದೆ. ಕೋವಿಡ್ ಮರಣ ಪ್ರಮಾಣವು ಶೇ.0.05ರಷ್ಟಿದೆ. ಮುಂಬೈ, ಪುಣೆ, ದೆಹಲಿ, ಚೆನ್ನೈಗೆ ಹೋಲಿಸಿದರೆ ಕಡಿಮೆ ಆಗಿದೆ.
ಐಸಿಎಂಆರ್ ಮಾರ್ಗಸೂಚಿಯಂತೆ ರ್ಯಾಪಿಡ್ ಆಂಟಿಜನ್, ಆರ್‍ಟಿಪಿಸಿಆರ್ ಹಾಗೂ ಐಜಿಜಿ ಆಯಂಟಿಬಾಡಿ ಪರೀಕ್ಷೆ ಮಾಡಲಾಗಿದೆ. ಒಟ್ಟು 16,585 ಜನರನ್ನು ಪರೀಕ್ಷೆಗೊಳಪಡಿಸಿದ್ದು, 15,624 ಮಂದಿಯ ಫಲಿತಾಂಶ ಬಂದಿದೆ.ಗರ್ಭಿಣಿಯರು, ಆಸ್ಪತ್ರೆಯ ಹೊರರೋಗಿ ವಿಭಾಗದ ರೋಗಿಗಳು, ಸಿಬ್ಬಂದಿ ಸೇರಿದಂತೆ ಕಡಿಮೆ ರಿಸ್ಕ್ ಹೊಂದಿದವರು, ಚಾಲಕರು, ವ್ಯಾಪಾರಿಗಳು, ಆರೋಗ್ಯ ಕಾರ್ಯಕರ್ತರು, ಕಂಟೇನ್ಮೆಂಟ್ ಜೋನ್‍ನಲ್ಲಿರುವ ಜನರು, ಕಸ ಸಂಗ್ರಹಣೆ ಮಾಡುವರು ಹಾಗೂ ಹೆಚ್ಚು ರಿಸ್ಕ್ ಹೊಂದಿರುವವರನ್ನು ವರ್ಗೀಕರಣ ಮಾಡಿ ಸರ್ವೇ ಮಾಡಲಾಗಿದೆ.
ಗುಣಮುಖರಾದವರ ಸಂಖ್ಯೆ ಶೇ.94-95ರಷ್ಟಿದೆ. ಹೀಗಾಗಿ ಸೋಂಕಿನ ಸಂಖ್ಯೆ ಹೆಚ್ಚಳದ ಬಗ್ಗೆ ಭಯಭೀತರಾಗುವುದು ಬೇಡ. ಸರಿಯಾದ ಸಂದರ್ಭದಲ್ಲಿ ಸೂಕ್ತ ಚಿಕಿತ್ಸೆ ನೀಡಿ ಜೀವ ಉಳಿಸುವುದು ನಮ್ಮ ಆದ್ಯತೆಯಾಗಿದೆ ಎಂದರು.



