ಡಿವಿಜಿ ಸುದ್ದಿ, ಬೆಂಗಳೂರು: ಕೊರೊನಾ ವೈರಸ್ ಸರಿಯಾಗಿ ನಿಯಂತ್ರಣಕ್ಕೆ ತರದಿದ್ದರಿಂದ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ ಎಂದು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಕ್ಲಾಸ್ ತೆಗೆದುಕೊಂಡಿದೆ.
ಎರಡು ವಾರಗಳ ಹಿಂದೆ ಕೊರೊನಾ ಸೋಂಕು ವೇಗವಾಗಿ ಹೆಚ್ಚುತ್ತಿದ್ದ ರಾಜ್ಯಗಳಾದ ಕರ್ನಾಟಕ, ರಾಜಸ್ಥಾನ, ಛತ್ತೀಸಗಡ, ಕೇರಳ ಮತ್ತು ಪಶ್ಚಿಮ ಬಂಗಾಳಕ್ಕೆ ಕೇಂದ್ರ ಸರ್ಕಾರವು ಪರಿಣಿತರ ತಂಡವನ್ನು ಕಳುಹಿಸಿತ್ತು. ಸಾಂಕ್ರಾಮಿಕ ರೋಗವನ್ನು ರಾಜ್ಯ ಸರ್ಕಾರಗಳು ಹೇಗೆ ನಿಭಾಯಿಸುತ್ತವೆ ಎಂಬುದರ ಪರಾಮರ್ಶೆ ನಡೆಸಲು ಈ ತಂಡಕ್ಕೆ ಸೂಚಿಸಲಾಗಿತ್ತು.
ಈ ತಂಡ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಈ ವರದಿಯ ಹಿನ್ನೆಲೆ ಕೊರೊನಾ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ವಿಫಲವಾಗಿರುವ ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.
ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಸಂಪರ್ಕಿತರ ಪತ್ತೆ ತೀವ್ರಗೊಳಿಸುವುದು, ಚಿಕಿತ್ಸೆ ಕೊಡುವುದು, ಕೊರೊನಾಗಾಗಿಯೇ ನಿಯೋಜನೆಗೊಂಡಿರುವ ಆಸ್ಪತ್ರೆಗಳಲ್ಲಿ ಚಿಕಿತ್ಸಾ ಸೌಕರ್ಯ ಹೆಚ್ಚಿಸುವುದು, ಕ್ವಾರಂಟೈನ್, ಐಸೊಲೇಷನ್ ವ್ಯವಸ್ಥೆ ಸುಧಾರಿಸುವುದು, ಟೆಸ್ಟಿಂಗ್ ವ್ಯವಸ್ಥೆ ಇನ್ನಷ್ಟು ಬಲಗೊಳಿಸುವಂತೆ ಸೂಚನೆ ನೀಡಿದೆ.
ಹಲವು ವಿಚಾರದ ಬಗ್ಗೆ ಕೇಂದ್ರ ತಂಡ ಸಲಹೆ ನೀಡಿದೆ. ಸಮಯೋಚಿತ ರೋಗ ನಿರ್ಣಯ ಮತ್ತು ಅನುಸರಣೆಗೆ ಸಂಬಂಧಿಸಿದ ಸವಾಲುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಕೇಂದ್ರ ತಂಡಗಳು ಮಾರ್ಗದರ್ಶನ ನೀಡುತ್ತಿದೆ.