ಡಿವಿಜಿ ಸುದ್ದಿ, ಬೆಂಗಳೂರು: ಕೊರೊನಾ ಸೋಂಕಿಗೆ ಲಸಿಕೆ ಲಭ್ಯವಾಗುವ ಬಗ್ಗೆ ಮಹತ್ವದ ಸುಳಿವು ಸಿಕ್ಕಿದ್ದು, 2021ರ ಆರಂಭದಲ್ಲಿ ಲಸಿಕೆ ಲಭ್ಯವಾಗಲಿದೆ ಎಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಈ ಬಗ್ಗೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ದಿನಗಳಿಂದ ರಾಜ್ಯದಲ್ಲಿ ಕೊರೊನಾ ಸೋಂಕು ಕಡಿಮೆಯಾಗಿದೆ. ನವೆಂಬರ್, ಡಿಸೆಂಬರ್, ಹಾಗೂ ಜನವರಿಯಲ್ಲಿ ಮೂರು ತಿಂಗಳು ಚಳಿಗಾಲವಿದ್ದು, ಚಳಿಗಾಲದಲ್ಲಿ ಕೋವಿಡ್ ಯಾವ ರೀತಿ ವರ್ತಿಸಲಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಹಾಗಾಗಿ ಪ್ರತಿಯೊಬ್ಬರು ಮುಂಜಾಗೃತೆ ವಹಿಸಬೇಕು ಎಂದರು.

ಕೊರೊನಾ ಸೋಂಕಿಗೆ ವ್ಯಾಕ್ಸಿನ್ ಸಿದ್ಧವಾಗುತ್ತಿದೆ. ಆಕ್ಸ್ ಫರ್ಡ್ ವಿವಿಯ ಆಸ್ಟ್ರಾಜನಿಕಾ ಸಂಸ್ಥೆ ಮೊದಲ ಹಂತದ ಲಸಿಕೆ ಪ್ರಯೋಗ ನಡೆಸಿದೆ. ಇನ್ನಷ್ಟು ಸಂಶೋಧನೆ ಮುಂದುವರಿದಿದೆ. ಇಂದು ಆಸ್ಟ್ರಾಜನಿಕಾ ಸಂಸ್ಥೆಯ ಎಂಡಿ ಗಗನ್ ದೀಪ್ ಜೊತೆ ಆರೋಗ್ಯ ಅಧಿಕಾರಿಗಳ ಸಭೆ ನಡೆಯಿತು. 2021ರ ಆರಂಭದಲ್ಲಿ ಲಸಿಕೆ ಲಭ್ಯವಾಗುವ ಭರವಸೆಯಿದೆ. ಲಸಿಕೆ ಸಾಧಕ-ಬಾಧಕ, ಸೋಂಕು ನಿವಾರಣೆಯಲ್ಲಿ ಯಾವ ರೀತಿ ಕೆಲಸ ಮಾಡುತ್ತೆ ಬಗ್ಗೆ ಸಮರ್ಪಕವಾಗಿ ಚರ್ಚೆ ನಡೆಯುತ್ತಿದೆ.
2021ರ ಆರಂಭದಲ್ಲಿ ಕರ್ನಾಟಕದಲ್ಲಿ ಲಸಿಕೆ ಲಭ್ಯವಾಗುವ ಸಾಧ್ಯತೆಯಿದೆ. ಮೈಸೂರಿನ ಜೆಎಸ್ಎಸ್ ಸಂಸ್ಥೆ, ಪುಣೆಯ ಸೆರಮ್ ಇನ್ ಸ್ಟಿಟ್ಯೂಟ್ ಜೊತೆಯೂ ಒಡಬಂಡಿಕೆ ಮಾಡಿಕೊಂಡಿದ್ದಾರೆ. ಹೀಗಾಗಿ ನಾವು ಲಸಿಕೆ ಹಂಚಿಕೆ ಮಾಡಲು ಸಿದ್ಧತೆ ನಡೆಸಿದ್ದೇವೆ ಎಂದು ತಿಳಿಸಿದರು.



