ಡಿವಿಜಿ ಸುದ್ದಿ, ದಾವಣಗೆರೆ: ನಗರದಲ್ಲಿ ನ.10 ರಿಂದ 17 ವೆರೆಗೆ ದೀಪಾವಳಿ ಹಬ್ಬದ ಪಟಾಕಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದರು.
ದಸರಾ, ದೀಪಾವಳಿ ಹಾಗೂ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಅ.31 ವರೆಗೆ ಪಟಾಕಿ ಮಾರಾಟಕ್ಕೆ ಅನುಮತಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಬಂದಂತಹ ಅರ್ಜಿ ಪರಿಶೀಲಿಸಿ ಸ್ಥಳಾವಕಾಶ ನೋಡಿಕೊಂಡು ಜಿಲ್ಲಾಧಿಕಾರಿಗಳು ಅನುಮತಿ ನೀಡಲಿದ್ದಾರೆ ಎಂದು ಹೇಳಿದರು.
ಹೈಸ್ಕೂಲ್ ಮೈದಾನದಲ್ಲಿ ಮಾರಾಟಕ್ಕೆ ಅವಕಾಶ ಕಲ್ಪಿಸಲಿದ್ದು, ಮೈದಾನದಲ್ಲಿ ಎಷ್ಟು ಜಾಗವಿದೆ ಎಂಬುದನ್ನು ಪರಿಶೀಲನೆ ನಂತರ ಮಳಿಗೆ ಹಂಚಿಕೆ ಮಾಡಲಾಗುವುದು. ಈ ಬಾರಿ ಕೊರೊನಾ ಹಿನ್ನೆಲೆ ಸರ್ಕಾರದ ಮಾರ್ಗ ಸೂಚಿ ಕಡ್ಡಾಯವಾಗಿ ಪಾಲನೆ ಮಾಡಬೇಕಿದೆ. ಮಾರಾಟ ವೇಳೆ ಮಾಸ್ಕ್, ಸಾಮಾಜಿಕ ಅಂತರ ಹಾಗೂ ಸಾನಿಟೈಸರ್ ಕಡ್ಡಾಯವಾಗಿ ಬಳಸಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, ಪಟಾಕಿ ಮಾರಾಕ್ಕೆ ಅ.31 ಕೊನೆಯ ದಿನವಾಗಿದ್ದು, ಮೊದಲು ಬಂದವರಿಗೆ ಮೊದಲ ಆದ್ಯತೆ ನೀಡಲಾಗುವುದು. ಹೈಸ್ಕೂಲ್ ಮೈದಾನದಲ್ಲಿ ಕೆಎಸ್ ಆರ್ ಟಿಸಿ ಹಾಗೂ ಖಾಸಗಿ ಬಸ್ ನಿಲ್ದಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಇರುವಂತಹ ಜಾಗ ನೋಡಿಕೊಂಡು ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.