ಡಿವಿಜಿ ಸುದ್ದಿ, ಬೆಂಗಳೂರು: ದಿಢೀರ್ ಖಾತೆ ಬದಲಾವಣೆಯಿಂದ ಅಸಮಾಧಾನಗೊಂಡಿದ್ದ ಸಚಿವ ಶ್ರಿರಾಮುಲು ಅವರನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ಸಮಾಧಾನಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇಂದು ಸಚಿವ ಸುಧಾಕರ್ ಮತ್ತು ಶ್ರೀರಾಮುಲು ಇಬ್ಬರನ್ನ ಕಾವೇರಿ ನಿವಾಸಕ್ಕೆ ಕರೆಸಿಕೊಂಡಿದ್ದರು. ಈ ವೇಳೆ ಇಬ್ಬರ ನಡುವೆ ಮಾತುಕತೆ ನಡೆಸಿ ಸಂಪುಟ ವಿಸ್ತರಣೆ ವೇಳೆ ನೋಡಿಕೊಳ್ಳೋಣ ಎಂದ ಸಿಎಂ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಸಿಎಂ ಭರವಸೆ ಹಿನ್ನೆಲೆ ಶ್ರೀರಾಮುಲು ಸಮಾಜ ಕಲ್ಯಾಣ ಇಲಾಖೆ ಖಾತೆ ಒಪ್ಪಿಕೊಂಡಿದ್ದಾರೆ.
ಸಿಎಂ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಶ್ರೀರಾಮುಲು, ಈ ಹಿಂದೆ ನನಗೆ ಸಮಾಜ ಕಲ್ಯಾಣ ಖಾತೆ ನೀಡಬೇಕೆಂದು ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿಕೊಂಡಿದ್ದೆ. ಅದರಂತೆ ಸಿಎಂ ಆ ಖಾತೆಯನ್ನ ನೀಡಿದ್ದಾರೆ. ಮಾಧ್ಯಮಗಳಲ್ಲಿ ಬಿತ್ತರವಾಗಿರುವಂತೆ ಯಾವುದೇ ಅಸಮಾಧಾನ ಇಲ್ಲ. ಕೊರೊನಾ ಕಾಲದಲ್ಲಿ ವೈದ್ಯಕೀಯ ಮತ್ತು ಆರೋಗ್ಯ ಇಲಾಖೆ ಒಬ್ಬರೇ ಬಳಿ ಇರೋದು ಉತ್ತಮ. ಹಾಗಾಗಿ ಆರೋಗ್ಯ ಇಲಾಖೆ ಖಾತೆಯನ್ನ ಸೋದರ ಸುಧಾಕರ್ ಅವರಿಗೆ ನೀಡಲಾಗಿದೆ. ಸುಧಾಕರ್ ವೈದ್ಯರಾಗಿದ್ದು, ಆರೋಗ್ಯ ಇಲಾಖೆಯನ್ನ ಉತ್ತಮವಾಗಿ ನಿರ್ವಹಿಸಲಿದ್ದಾರೆ ಎಂದು ಹೇಳಿದರು.
ಸಚಿವ ಸುಧಾಕರ್ ಮಾತನಾಡಿ, ಬಿಹಾರ ಮತ್ತು ಉಪ ಚುನಾವಣೆ ಹಿನ್ನೆಲೆ ಸಂಪುಟ ವಿಸ್ತರಣೆಗೆ ಹೈಕಮಾಂಡ್ ನಿಂದ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಈ ಹಿನ್ನೆಲೆ ಕೆಲ ತಾಂತ್ರಿಕೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಖಾತೆಗಳ ಬದಲಾವಣೆಯಾಗಿದೆ. ಶ್ರೀರಾಮುಲು ಅಣ್ಣ ರಾಜಕೀಯದಲ್ಲಿ ನನಗಿಂತ ಹಿರಿಯರು. ಸಮಾಜ ಕಲ್ಯಾಣ ಅನ್ನೋದು ಪ್ರಬಲ ಖಾತೆ ಎಂದರು.