ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲೆಯಾದ್ಯಂತ ಸುಮಾರು 66 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದ್ದು, ಭತ್ತದ ಬೆಳೆಯು ಬೆಳವಣಿಗೆ ಹಂತದಿಂದ ಕಾಳು ಕಟ್ಟುವ ಹಂತದಲ್ಲಿದೆ. ಕೆಲ ಪ್ರದೇಶಗಳಲ್ಲಿ ದುಂಡಾಣು ಅಂಗಮಾರಿ ರೋಗದ ಬಾಧೆಯು ಕಾಣಿಸಿಕೊಂಡಿದೆ ಇದರ ನಿರ್ವಣೆ ಮಾಡಲು ಬೇಕಾದ ಕ್ರಮಗಳ ಬಗ್ಗೆ ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ರೈತರಿಗೆ ಸಲಹೆ ನೀಡಿದ್ದಾರೆ.
ಈ ರೋಗವು Xanthomonas oryzae ಎಂಬ ದುಂಡಾಣುವಿನಿಂದ (ಬ್ಯಾಕ್ಟೀರಿಯಾ) ಹರಡುವುದು. ಎಲೆಯ ಅಂಚಿನಲ್ಲಿ ಉದ್ದನೆಯ ಒಣಗಿದ ಪಟ್ಟಿಗಳು ಕಂಡು ಬರುತ್ತವೆ. ನಂತರದ ಹಂತದಲ್ಲಿ ಎಲೆಗಳು ಪೂರ್ತಿಯಾಗಿ ಒಣಗಿದಂತಾಗುತ್ತದೆ. ಗೋಣಿ ಚೀಲದಲ್ಲಿ ಸಗಣಿಯನ್ನು ಹಾಕಿ ಕಟ್ಟಿ, ನೀರು ಹಾಯಿಸುವ ಜಾಗದಲ್ಲಿ ಇಡುವುದರಿಂದ ನೀರಿನ ಜೊತೆಯಲ್ಲಿ ಹರಿಯುವ ಸಗಣ ರಾಡಿಯಿಂದ ಈ ರೋಗವನ್ನು ನಿರ್ವಹಣೆ ಮಾಡಬಹುದು.
ಸ್ಟೈಪ್ಟೋಸೈಕ್ಲಿನ್ 0.5ಗ್ರಾಂ. ಮತ್ತು ತಾಮ್ರದ ಆಕ್ಸಿಕ್ಲೋರೈಡ್ 2.45 ಗ್ರಾಂ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ಮೂಲಕ ತಿಳಿಸಿದ್ದಾರೆ.



