ಡಿವಿಜಿ ಸುದ್ದಿ, ಮೈಸೂರು: ಕೃಷಿ ಕಾಯ್ದೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ರೈತರ ಹಾದಿ ತಪ್ಪಿಸುವ ಕೆಲಸದಲ್ಲಿ ತೊಡಗಿದೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ಕಿಡಿಕಾರಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 60ರ ದಶಕದಲ್ಲಿ ಆಹಾರಕ್ಕಾಗಿ ಬೇರೆ ಬೇರೆ ದೇಶಗಳ ಭಿಕ್ಷೆ ಬೇಡಬೇಕಿತ್ತು. ಈಗ ಇಡೀ ವಿಶ್ವಕ್ಕೆ ಆಹಾರ ಪೂರೈಸುವ ಶಕ್ತಿ ಹೊಂದಿದ್ದೇವೆ. ಈ ವಿಚಾರವನ್ನು ಪ್ರತಿ ರೈತನ ಮನೆಗೆ ಹೋಗಿ ಕೃಷಿ ಮಸೂದೆಗಳ ಉದ್ದೇಶ ತಿಳಿಸಿಕೊಡುತ್ತೇವೆ ಎಂದರು.
ರೈತ ಮುಖಂಡರು ಮುಂದೆ ಬಂದರೆ ಚರ್ಚಿಸಲು ಸಿದ್ಧ. ಆದರೆ, ರಾಜಕೀಯ ವಿರೋಧಿಗಳ ಜೊತೆ ಮಾತನಾಡುವುದಿಲ್ಲ. ಅವರದ್ದು ಬರೀ ವಿರೋಧದ ಕೆಲಸ. ನಾವು ತಂದಿರುವ ತಿದ್ದುಪಡಿಗಳನ್ನು ಹಿಂದೆ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಅಳವಡಿಸಿಕೊಂಡಿದ್ದ ಕಾಂಗ್ರೆಸ್‌ನವರು ಈಗ ನಮ್ಮನ್ನು ಟೀಕಿಸುತ್ತಿದ್ದಾರೆ ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿ ಆಗಿದ್ದಾಗ 49 ಕಾರ್ಪೊರೇಟ್ ಕಂಪನಿಗಳಿಗೆ ವಿವಿಧ ಸ್ವರೂಪದಲ್ಲಿ ಪರವಾನಗಿ ಹಾಗೂ ಅವಕಾಶ ಮಾಡಿಕೊಟ್ಟರು. ಈಗ ನಮ್ಮ ನಿಲುವು ಪ್ರಶ್ನಿಸುತ್ತಿದ್ದಾರೆ.
ಕಾಂಗ್ರೆಸ್‌ವರಿಗೆ ಬೇರೆ ಏನೂ ಕೆಲಸ ಇಲ್ಲವೆಂದರೆ ಮನೆಯಲ್ಲಿ ಕುಳಿತುಕೊಳ್ಳಲಿ. ಈಗ ಕೋವಿಡ್ ಬೇರೆ ಇದೆ. ಹೀಗಾಗಿ, ರೈತರಿಂದ ಅಂತರ ಕಾಯ್ದುಕೊಂಡರೆ ಒಳ್ಳೆಯದು. ಅವರ ಕೆಟ್ಟ ಗಾಳಿ ರೈತರಿಗೆ ತಾಗುವ ಅಪಾಯವಿದೆ. ಮಾಸ್ಕ್ ಹಾಕಿಕೊಂಡು ಬಾಯಿ ಮುಚ್ಚಿಕೊಳ್ಳಲಿ. ಆಗಾಗ್ಗೆ ಸ್ಯಾನಿಟೈಸ್ ಹಾಕಿಕೊಳ್ಳಲಿ ಎಂದರು.
1990ರ ದಶಕದಲ್ಲಿ ಜಾರಿಗೆ ತಂದ ಉದಾರೀಕರಣದಲ್ಲೂ ರೈತರಿಗೆ ನೆರವು ಸಿಗಲಿಲ್ಲ. ಹೀಗಾಗಿ, ಕೃಷಿ ಮಸೂದೆಗಳನ್ನು ತಿದ್ದುಪಡಿ ಮಾಡಿ ರೈತರಿಗೆ ಸ್ವಾಭಿಮಾನ ಹಾಗೂ ಸ್ವತಂತ್ರ ನೀಡುವ ಮಸೂದೆ ತಂದಿದ್ದೇವೆ ಎಂದು ಎಪಿಎಂಸಿ ಹಾಗೂ ಭೂ ಸುಧಾರಣೆ ಕಾಯ್ದೆ ತಿದ್ದುಪಡಿಯನ್ನು ಸಮರ್ಥಿಸಿಕೊಂಡರು.