ಡಿವಿಜಿ ಸುದ್ದಿ, ಕಲಬುರ್ಗಿ: ನಾನು ಯಾರ ಹೆಗಲ ಮೇಲೂ ಕೈಯಿಟ್ಟು ಪಕ್ಷ ಮುನ್ನಡೆಸುತ್ತಿಲ್ಲ. ಇವತ್ತು ಜೆಡಿಎಸ್ ಶಕ್ತಿ ಕಡಿಮೆಯಾಗಿದೆ. ಆದರೆ, ಕಾರ್ಯಕರ್ತರು ನಮ್ಮ ಜೊತೆಗಿದ್ದಾರೆ. ಪಕ್ಷ ಮುನ್ನಡೆಸೋದು ಅಷ್ಟೇ ನಮ್ಮ ಗುರಿ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಯಾರ ಹೇಳಿಕೆ ಬಗ್ಗೆಯೂ ಮಾತಾಡೋಕೆ ಹೋಗುವುದಿಲ್ಲ. ಅದರ ಅವಶ್ಯಕತೆಯೂ ಇಲ್ಲ. ನಮ್ಮ ಪಕ್ಷ ಯಾರು ಯಾರನ್ನು ಬೆಳೆಸಿದೆ ಎಲ್ಲರಿಗೂ ಗೊತ್ತಿದೆ. ಯಾರ್ಯಾರು ಯಾವ ಪಕ್ಷ ಸೇರಿದರೂ ಅನ್ನುವುದೂ ಗೊತ್ತಿದೆ ಸಿದ್ದರಾಮಯ್ಯ ಅವರಿಗೆ ಟಾಂಗ್ ಕೊಟ್ಟರು.
ಚುನಾವಣಾ ಸಂದರ್ಭದಲ್ಲಿ ಏನೇನು ಮಾತನಾಡುತ್ತಿದ್ದಾರೆ ಅನ್ನೋದನ್ನೂ ಗಮನಿಸಿದ್ದೇನೆ. ನಾನು ನಿನ್ನೆ ರಾಜಕಾರಣಕ್ಕೆ ಬಂದಿಲ್ಲ. 1970ರಿಂದಲೂ ಈ ಭಾಗದಲ್ಲಿ ಪ್ರವಾಸ ಮಾಡಿದ್ದೇನೆ. ನನಗೆ ಪಕ್ಷ ಬೆಳೆಸುವುದಷ್ಟೇ ಮುಖ್ಯ ಎಂದರು.
ವಿಧಾನಸಭೆ ಹಾಗೂ ವಿಧಾನಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಏಕಾಂಗಿಯಾಗಿ ಸ್ಪರ್ಧಿಸಲಿದ್ದು, ಪಕ್ಷದ ಕಾರ್ಯಕರ್ತರ ಬೆಂಬಲದೊಂದಿಗೆ ಚುನಾವಣೆ ಎದುರಿಸಲಿದ್ದೇವೆ. ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ತಿಮ್ಮಯ್ಯ ಪುರ್ಲೆ ನಾಮಪತ್ರ ಸಲ್ಲಿಕೆಯಲ್ಲಿ ಭಾಗವಹಿಸುವುದಕ್ಕೂ ಮುನ್ನ ಮಾತನಾಡಿದರು.
ಯಾರು ಎಷ್ಟೇ ಲಘುವಾಗಿ ಮಾತಾಡಿದರೂ ಚುನಾವಣೆ ನಂತರ ಉತ್ತರ ಕೊಡುತ್ತೇನೆ. ಯಾರ ಮಾತಿನ ಬಗ್ಗೆಯೂ ಕಿವಿಗೊಡುವುದಿಲ್ಲ. ಪಕ್ಷ ಸಂಘಟನೆ ಕಡೆ ಒತ್ತು ಕೊಡುತ್ತೇನೆ ಎಂದರು.



