ಡಿವಿಜಿ ಸುದ್ದಿ, ಬೆಂಗಳೂರು: ವಿರೋಧಿಗಳ ಇಂತಹ ಒತ್ತಡಕ್ಕೆ ಹೆದರುವ ಮಗ ನಾನಲ್ಲ. ಯಾವುದಕ್ಕೂ ಜಗ್ಗಲ್ಲ. ಉಪ ಚುನಾವಣೆ ನಡೆಯುವವರೆಗೂ ಈ ಕಾಟ ಇರುತ್ತದೆ ಎಂದು ಡಿಕೆಶಿ ಹೇಳಿದ್ದಾರೆ.
ಸಿಬಿಐ ದಾಳಿ ಬಳಿಕ ನಿವಾಸದಿಂದ ಹೊರಬಂದು ಕಾರ್ಯರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, 30 ವರ್ಷಗಳಿಂದ ಇರುವ ಎಲ್ಲ ಮಂತ್ರಿಗಳು ಹರಿಶ್ಚಂದ್ರನ ಮೊಮ್ಮಕ್ಕಳು. ಈಗ ನನಗೆ ರಾಜಕೀಯವಾಗಿ ತೊಂದರೆ ನೀಡುತ್ತಿದ್ದರಲ್ಲ ಅವರೆಲ್ಲ ಚೆನ್ನಾಗಿರಲಿ ಎಂದರು.

ನಾನು ನನ್ನ ಸಹೋದರ, ಕುಟುಂಬ ಮತ್ತು ಕಾಂಗ್ರೆಸ್ ಪಕ್ಷದ ಅಭಿಮಾನಕ್ಕೆ ತಲೆ ಬಾಗಿ ವಂದಿಸುತ್ತೇನೆ. 2017 ರಲ್ಲಿ ಗುಜರಾತ್ ರಾಜ್ಯಸಭಾ ಚುನಾವಣೆಯ ವೇಳೆ ಆದಾಯ ತೆರಿಗೆ ಇಲಾಖೆಯವರು ದಾಳಿ ಮಾಡಿದ್ದರು. 2019 ರಲ್ಲಿ ಇಡಿಯವರು ಕೇಸ್ ಹಾಕಿ ತಿಹಾರ್ ಜೈಲಿಗೆ ಕಳುಹಿಸಿದರು. ಈಗ 2020ರಲ್ಲಿ ಸಿಬಿಐ ಬಂದಿದೆ. ಯಾವುದಕ್ಕೂ ನಾನು ಜಗ್ಗುವ ವ್ಯಕ್ತಿಯಲ್ಲ ಎಂದು ಕಿಡಿಕಾರಿದರು.
ಅಡ್ವೋಕೇಟ್ ಜನರಲ್ ಬೇಡ ಎಂದರೂ ಸಿಬಿಐನವರು ಬಂದಿದ್ದಾರೆ. ಇದು ಸಿಬಿಐ ತನಿಖೆ ನಡೆಸುವ ಕೇಸಲ್ಲ. ಪಾಪ ಅವರಿಗೆ ಏನು ಒತ್ತಡ ಇರುತ್ತೊ ಏನೋ ಎಂದು ಪ್ರಶ್ನೆ ಮಾಡಿದರು. ಈ ಕೇಸ್ ನಿಂದ ಪಕ್ಷದ ಕಾರ್ಯಕರ್ತರು ಹೆದರುವ ಅವಶ್ಯಕತೆ ಇಲ್ಲ. ನಾನುಂಟು ನೀವುಂಟು. ಭಕ್ತ ಉಂಟು, ಭಗವಂತ ಉಂಟು. ಈ ಬಾರಿಯ ಉಪಚುನಾವಣೆಯಲ್ಲಿ ಇದಕ್ಕೆ ಉತ್ತರ ನೀಡಬೇಕೆಂದು ಕೇಳಿಕೊಳ್ಳುತ್ತೇನೆ. ರಾಜಕೀಯವಾಗಿ ತೊಂದರೆ ನೀಡಿ ನನ್ನ ಬಾಯಿ ಮುಚ್ಚಿಸಲು ಹೊರಟಿದ್ದಾರೆ. ಇದು ಸಾಧ್ಯವಿಲ್ಲ ಎಂದರು.



