ಡಿವಿಜಿ ಸುದ್ದಿ, ಮೈಸೂರು: ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಮಯದಲ್ಲಿ ಜಿಲ್ಲಾಡಳಿತ ದಸರಾ ಆಚರಿಸಲು ಹೊರಟಿದೆ. ಈ ವೇಳೆ ಎಚ್ಚರ ತಪ್ಪಿದರೆ, ಜಂಬೂ ಸವಾರಿ ಹೋಗಿ ಬಂಬೂ ಸವಾರಿ ಆಗಿತು ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಎಚ್ಚರಿಕೆ ನೀಡಿದರು.
ಸಾಂಕೇತಿಕವಾಗಿ ಜಂಬೂಸವಾರಿಗೆ ಪುಷ್ಪಾರ್ಚನೆ ಮಾಡಿದರೆ ಸಾಕು. ಯಾವುದೇ ಕಾರ್ಯಕ್ರಮ ಅವಶ್ಯಕತೆ ಇಲ್ಲ. ಎರಡು ಸಾವಿರ ಜನರ ಸೇರಿಸಲು ನಿರ್ಧರಿಸಿದ್ದಾರೆ. ಆದರೆ, ರಾಜಕೀಯದವರು, ಅಧಿಕಾರಿಗಳು, ಅವರ ಹೆಂಡತಿ, ಇವರ ಹೆಂಡತಿ, ಕುಟುಂದವರು ಸೇರಿ ಅಂದು 10 ಸಾವಿರ ಆಗುತ್ತಾರೆ. ಈಗಾಗಲೇ ಹಾಸಿಗೆಗಳು ಇಲ್ಲ ಎಂದು ಎಚ್ಚರಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಯಾವುದೇ ಕಾರ್ಯಕ್ರಮ ಬೇಡ. ಈಗ ಕೋತಿ ಕುಣಿದರೂ ಸಾವಿರಾರು ಜನ ಸೇರುತ್ತಾರೆ. ಅಂಥದ್ದರಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿದರೆ ಹೆಚ್ಚು ಜನ ಸೇರುವುದಿಲ್ಲವೇ? ಏನಾದರೂ ಸಮಸ್ಯೆಯಾದರೆ ಯಾರು ಹೊಣೆ? ಮೈಸೂರು ಜಿಲ್ಲಾಡಳಿತ ಹಾಗೂ ಉಸ್ತುವಾರಿ ಸಚಿವರಿಗೆ ಅರ್ಥವಾಗುತ್ತಿಲ್ಲ. ಹಿರಿಯರಾದ ಜಿ.ಟಿ. ದೇವೇಗೌಡ, ಎಸ್.ಎ. ರಾಮದಾಸ್, ಸಾ.ರಾ. ಮಹೇಶ್ ಸಲಹೆ ನೀಡಬೇಕಲ್ಲವೇ ಎಂದು ಸಲಹೆ ನೀಡಿದರು.



