ಡಿವಿಜಿ ಸುದ್ದಿ, ದಾವಣಗೆರೆ: ಮಹಾತ್ಮಾ ಗಾಂಧೀಜಿಯವರು ರೈತರ ಶೋಷಣೆಗಳ ವಿರುದ್ದ ಒಂದು ಶತಮಾನದ ಹಿಂದೆಯೇ ಹೋರಾಟ ಮಾಡಿದ್ದರು ಎಂದು ಪ್ರೊ. ಎಂ. ಜಿ. ಈಶ್ವರಪ್ಪ ಹೇಳಿದರು.
ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಿದ್ದ ಗಾಂಧೀಜಿ ಮತ್ತು ಶಾಸ್ತ್ರೀಜಿ ಅವರ ಜನ್ಮ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಶತಮಾನಗಳಿಂದ ರೈತರ ಶೋಷಣೆಗಳು ಮುಂದುವರೆದು ಕೊಂಡು ಬಂದಿರುವುದು ದುರದೃಷ್ಠಕರ. ಗಾಂಧೀಜಿಯವರು ಬ್ರಿಟಿಷರ ಕಾಲದಲ್ಲಿ ರೈತರ ಪರವಾಗಿ ಅನೇಕ ಚಳವಳಿಗಳಲ್ಲಿ ಭಾಗವಹಿಸಿದ್ದರು ಎಂದರು.
ಅವರ ಸರಳತೆ, ಅಹಿಂಸೆ ಮತ್ತು ಜಾತ್ಯಾತೀತ ತತ್ವಗಳು ಇಂದಿಗೂ ಪ್ರಪಂಚದಲ್ಲಿ ಅನುಕರಣಿಯವಾಗಿವೆ ಮತ್ತು ಈಗಿನ ಮುಖಂಡರಿಗೆ ನೀತಿ ಪಾಠವಾಗಿದೆ. ಚಂಪರನ್ ಕೃಷಿ ಚಳವಳಿಯಲ್ಲಿ ಭಾಗವಹಿಸಿದ್ದ ಗಾಂಧೀಜಿಯವರು, ಕೃಷಿಕರ ಅಭ್ಯುದಯಕ್ಕೆ ಬಹಳವೇ ಚಿಂತನೆ ಮಾಡುತ್ತಿದ್ದರು. ಮಹಿಳೆಯೊಬ್ಬಳು ಮಧ್ಯರಾತ್ರಿ ಸುರಕ್ಷಿತವಾಗಿ ಓಡಾಡುವಂತಾದರೆ ನಿಜವಾಗಿ ಸ್ವಾತಂತ್ರ ಸಿಕ್ಕಿದಂತೆ, ಆದರೆ ಪ್ರಸ್ತುತ ಹಗಲು ಸಮಯದಲ್ಲೇ ಮಹಿಳೆಯೊಬ್ಬಳು ಓಡಾಡುವ ಪರಿಸ್ಥಿತಿಯಿಲ್ಲ.
ಸಮಾಜದ ಶೋಷಿತ ವರ್ಗದ ಪರವಾಗಿ ಧ್ವನಿ ಎತ್ತಿದ ಅವರು ‘ಹರಿಜನ’ ದಿನ ಪತ್ರಿಕೆಯನ್ನು ಪ್ರಾರಂಭಿಸಿದ್ದರು. ಸ್ವಚ್ಛತಾ ಆಂದೋಲನವನ್ನು ಅವರು ಮೊದಲು ಪ್ರಾರಂಭಿಸಿದರು ಮತ್ತು ಅದು ಇಂದಿಗೂ ಮುಂದುವರೆದಿದೆ ಎಂದರು. ಕಾರ್ಯಕ್ರಮದಲ್ಲಿ ಕೇಂದ್ರದ ಸಿಬ್ಬಂದಿ ಹಾಗೂ ರೈತರು ಭಾಗವಹಿಸಿದ್ದರು.



