ಡಿವಿಜಿ.ಸುದ್ದಿ.ಕಾಂ, ದಾವಣಗೆರೆ: ವಸತಿ ರಹಿತರಿಗೆ ಆಶ್ರಯ ಮನೆ ಕಟ್ಟಿಸಿಕೊಡಬೇಕೆಂದು ಒತ್ತಾಯಿಸಿ ಆವರಗೆರೆ 23 ನೇ ವಾರ್ಡ್ ಕೊಳಗೇರಿ ನಿವಾಸಿಗಳು ಮಹಾನಗರ ಪಾಲಿಕೆ ಮುಂಭಾಗ ಪ್ರತಿಭಟನೆ ನಡೆಸಿದರು.
ಹಲವು ವರ್ಷಗಳಿಂದ ನಿವೇಶನ ರಹಿತ ಮನೆ ನಿರ್ಮಿಸಿಕೊಡಬೇಕೆಂದು ಒತ್ತಾಯಿಸಿ ಮನವಿ ಮಾಡುತ್ತಾ ಬಂದಿದ್ದೇವೆ. ಆದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ನಮ್ಮ ಬೇಡಿಕೆ ಈಡೇರಿಸುವ ಮನಸ್ಸು ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅವರಗೆರೆ23 ನೇ ವಾರ್ಡ್ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ನಿವೇಶನ ರಹಿತ ವಾಸ ಮಾಡುತ್ತಿದ್ದಾರೆ. ಸ್ವಾತಂತ್ರ್ಯ ಬಂದು70 ವರ್ಷವಾದರು ಬಡವರು ನೆಮ್ಮದಿಯಾಗಿ ಬದುಕಲು ಸೂರು,ಉದ್ಯೋಗ ಭದ್ರತೆ ಇಲ್ಲ. ಗೋಶಾಲೆ ಬಡಾವಣೆಯ ಹಳ್ಳದ ಪಕ್ಕದಲ್ಲಿ ಗುಡಿಸಲುಗಳಲ್ಲಿ ವಾಸ ಮಾಡುತ್ತಿದ್ದೇವೆ. ದಿನಗೂಲಿ ಕೆಲಸವನ್ನು ನಂಬಿ ಜೀವನ ನಡೆಸುತ್ತಿದ್ದೇವೆ. ಹೀಗಾಗಿ ನಮಗೆ ವಸತಿ ನೀಡಬೇಕು ಎಂದು ಪಾಲಿಕೆ ಆಯುಕ್ತರಿಗೆ ಮನವಿ ಮಾಡಿದರು.
ಈ ಕೂಡಲೇ ನಮಗೆ ಸೂರು ನೀಡಿ ನೆಮ್ಮದಿಯ ಜೀವನ ನಡೆಸಲು ಅನುವು ಮಾಡಿಕೊಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಈ ವೇಳೆ ಸಿ.ಗುರುಮೂರ್ತಿ, ಆವರಗೆರೆ ವಾಸು, ತಿಪ್ಪೇಶ್, ಬಿ.ಮಂಜುನಾಥ್, ರಾಜುಕೇರನಹಳ್ಳಿ, ಲತಾ ನಾಗರಾಜ್, ಮಂಜುಳಾ, ರಿಹಾನಬಾನು, ಲಕ್ಷ್ಮಣ್, ಯಶೋಧಮ್ಮ ಸೇರಿದಂತೆ ನೂರಾರು ಪ್ರತಿಭಟನಕಾರರು ಇದ್ದರು.