ಡಿವಿಜಿ ಸುದ್ದಿ, ಸಿರಿಗೆರೆ: ಲಿಂ. ಶ್ರೀ ಶಿವಕುಮಾರ ಶಿವಾಚಾರ್ಯ ಶ್ರೀಗಳು ಜಗದೊಳಿತಿಗಾಗಿ ಜನಿಸಿದ ಜಗದ್ಗುರು, ನಾಡಿನ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರಗಳ ಮಹಾದಾಸೋಹಿ. ಭಕ್ತರ ಸುಖ ದುಃಖಗಳನ್ನು ತಮ್ಮವೇ ಸುಖ ದುಃಖಗಳೆಂದು ಭಾವಿಸಿ ಸಮಾಜದ ಕಣ್ಣೀರೊರೆಸಿ ಬಿದ್ದವರ ಬಾಳಿನಲ್ಲಿ ಬೆಳದಿಂಗಳು ಮೂಡಿಸಿದ ದಿವ್ಯ ಚೇತನ ಎಂದು ತರಳಬಾಳು ಬೃಹ್ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ಸಿರಿಗೆರೆಯ ತರಳಬಾಳು ಬೃಹನ್ಮಠದಲ್ಲಿ ಹಿರಿಯ ಶ್ರೀ ಲಿಂ. ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರು 28ನೇ ಶ್ರದ್ಧಾಂಜಲಿ ಕಾರ್ಯಕ್ರಮ ಗುರುವಾರ ಸರಳವಾಗಿ ನೆರವೇರಿತು. ಪುಣ್ಯತಿಥಿ ಸಂದರ್ಭದಲ್ಲಿ ಶ್ರೀಗಳ ಕಂಚಿನ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ನಂತರ ಶ್ರೀ ಗುರುಪಿತಾಮಹ ಗುರುಶಾಂತ ದೇಶಿಕೇಂದ್ರ ಸ್ವಾಮೀಜಿಯವರ ಪ್ರತಿಮೆಗೆ ಪೂಜೆ ಸಲ್ಲಿಸಿದರು. ಬಳಿಕ ಭಕ್ತರನ್ನು ಉದ್ದೇಶಿಸಿ ಅಂತರ್ಜಾಲದ ಮೂಲಕ ಆಶೀರ್ವಚನ ದಯಪಾಲಿಸಿದರು.

ಐಕ್ಯಮಂಟಪ ಬಾಳೆಕಂದು, ಮಾವಿನ ತೋರಣ ಮತ್ತು ತರಹೇವಾರಿ ಪುಷ್ಪಗಳಿಂದ ಕಂಗೊಳಿಸುತ್ತಿತ್ತು. ಆದರೆ ಭಕ್ತರ ಸುಳಿವಿಲ್ಲದೇ ಪ್ರಶಾಂತತೆ ಕಾಣುತ್ತಿತ್ತು. ಪೂಜಾ ವಿಧಿವಿಧಾನಗಳು ಐಕ್ಯ ಮಂಟಪಕ್ಕೆ ಮಾತ್ರ ಸೀಮಿತವಾಗಿದ್ದವು. ಮಠದ ಐಕ್ಯಮಂಟಪದಲ್ಲಿ ಗುರುವಾರ ಬೆಳಿಗ್ಗೆ 5ಕ್ಕೆ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ ಕಂಚಿನ ಪುತ್ಥಳಿಗೆ ಅಭಿಷೇಕ ನೆರವೇರಿತು. ಗುರುಕುಲದ ವಿದ್ಯಾರ್ಥಿಗಳು ವಚನಗೀತೆ ಹಾಡುವ ಮೂಲಕ ಪೂಜಾ ಕೈಂಕರ್ಯ ಪೂರ್ಣಗೊಳಿಸಿದರು.
ಪ್ರತಿವರ್ಷ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯುತ್ತಿದ್ದ ಶ್ರದ್ಧಾಂಜಲಿ ಸಮಾರಂಭ ಕೋವಿಡ್ ಕಾರಣಕ್ಕೆ ಸರಳ ರೂಪ ಪಡೆಯಿತು. ಸಿರಿಗೆರೆ ಗ್ರಾಮದ ಪ್ರತಿ ಮನೆಯಲ್ಲಿಯೂ ಸೇರಿದಂತೆ ರಾಜ್ಯದ್ಯಾಂತ ನೆಲೆಸಿರುವ ಮಠದ ಅಪಾರ ಭಕ್ತ ವೃಂದ ಈ ಬಾರಿ ಮನೆಯಲ್ಲಿಯೇ ಕುಟುಂಬದ ಸದಸ್ಯರುಗಳು ಸೇರಿ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರ ನಾಮಸ್ಮರಣೆ ಮಾಡುವಲ್ಲಿ ಮಗ್ನರಾಗಿದ್ದರು. 14 ಜಿಲ್ಲೆಗಳ 250 ಕ್ಕೂ ಹೆಚ್ಚು ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಶಾಲಾ-ಕಾಲೇಜುಗಳ ನೌಕರ ವರ್ಗದವರು ಗುರುಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಸಾಂಪ್ರದಾಯಿಕ ಆಚರಣೆಯಿಂದ ಸಾಮಾಜಿಕ ಸಂಕಷ್ಟ ಎದುರಾಗಬಾರದು. ಜನಜಂಗುಳಿ ಸೇರದಂತೆ ಶ್ರದ್ಧಾಂಜಲಿಯ ವಿಧಿವಿಧಾನ ಪೂರೈಸಲಾಗಿದೆ. ಹಳೆಯ ಸಂಪ್ರದಾಯ ಬದಿಗೊತ್ತಿ ಸಾಮಾಜಿಕ ಹಿತ ಕಾಪಾಡಲಾಗಿದೆ. ಸಮಾಜದ ಮೇಲೆ ಬೀರುವ ವ್ಯತಿರಿಕ್ತ ಪರಿಣಾಮಗಳನ್ನು ಸರಿಪಡಿಸುವಲ್ಲಿ ಇದೊಂದು ಹೊಸ ಹೆಜ್ಜೆ ಎಂದು ತಿಳಿಸಿದರು.

ಗುರುವಿಗೆ ಅಂಜಿ ಶಿಷ್ಯರೂ, ಶಿಷ್ಯರಿಗೆ ಅಂಜಿ ಗುರುವೂ ನಡೆಯಬೇಕೆಂಬುದು ನಮ್ಮ ಲಿಂಗೈಕ್ಯ ಗುರುವರ್ಯರ ಆಣತಿಯಾಗಿತ್ತು. ಆದರೆ, ಈಗ ಗುರು ಶಿಷ್ಯರಾದಿಯಾಗಿಯೂ ಕೊರೊನಾ ಎಂಬ ವೈರಾಣುವಿಗೆ ಅಂಜಿ ನಡೆಯಬೇಕಾದ ವಿಷಮ ಪರಿಸ್ಥಿತಿ ಉಂಟಾಗಿದೆ. ಇದುವರೆಗೂ ನಗರಗಳಿಗೆ ವ್ಯಾಪಿಸಿದ್ದ ಕೊರೊನಾ ಹಳ್ಳಿಗಳಿಗೆ ಹರಡಿ ಅವರ ಜೀವನೋಪಾಯವನ್ನು ಕಸಿದುಕೊಂಡು ಅವರನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿದೆ. ಜೀವನೋಪಾಯವನ್ನು ಕಸಿದುಕೊಂಡು ಅವರನ್ನು ಆರ್ಥಿಕ ಸಂಕಷ್ಟಕ್ಕೆ ತಲುಪಿಸಿದೆ ಎಂದು ಖೇದ ವ್ಯಕ್ತಪಡಿಸಿದರು.
ಭಕ್ತರು ಕೊರೊನಾ ಎಂಬ ಮಹಾಮಾರಿಯ ವೈರಾಣುವಿಗೆ ಅಂಜದೇ ನಿಮ್ಮ ದಿನನಿತ್ಯದ ಕಾರ್ಯ ಚಟುವಟಿಕೆಯಲ್ಲಿ ವೈದ್ಯರ ಸಲಹೆಯಂತೆ ಸಾಮಾಜಿಕ ಅಂತರ ಕಾಯ್ದುಕೊಂಡು ಸ್ಯಾನಿಟೈಸರ್ ಬಳಕೆಯೊಂದಿಗೆ ತೊಡಗಿಕೊಳ್ಳುವುದು ಒಳಿತು.ಇತಿಹಾಸ ಪ್ರಸಿದ್ದ ಸ್ಥಳವಾದ ಹಳೇಬೀಡಿನಲ್ಲಿ ತರಳ ಬಾಳು ಹುಣ್ಣಿಮೆ ಮಹೋತ್ಸವವು ವಿಜೃಂಭಣೆಯಿಂದ ನಡೆಯಿತು. ಆ ಸಮಾರಂಭದಲ್ಲಿ ನೀವೆಲ್ಲರೂ ಭಾಗವಹಿಸಿ ರುವುದು ಸಂತೋಷ ತಂದಿದೆ. ಆ ಭಾಗದ ರೈತರ ಮತ್ತು ಜಾನುವಾರುಗಳ ನೀರಿನ ಬವಣೆಯನ್ನು ಮನಗಂಡು ಕೆರೆಗಳಿಗೆ ಮತ್ತು ಕುಡಿಯುವ ನೀರಿನ ಸಮಸ್ಯೆಯನ್ನು ಸರ್ಕಾರದ ಯೋಜನೆಗಳ ಮುಖಾಂತರ ಬಗೆಹರಿಸುವ ಕಾರ್ಯ ಭರದಿಂದ ಸಾಗಿದೆ ಎಂದು ತಿಳಿಸಿದರು.
ಹಿರಿಯ ಗುರುಗಳು ಶೈಕ್ಷಣಿಕವಾಗಿ ಹಿಂದುಳಿದ ಗ್ರಾಮೀಣ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವ ಸಂಕಲ್ಪವನ್ನು ಮಾಡಿದ್ದರು. ಯಾವ ಸಮಾಜದಲ್ಲಿ ಉತ್ತಮ ತಾಯಂದಿರಿಲ್ಲವೋ, ಆ ಸಮಾಜ ಏಳಿಗೆ ಹೊಂದಲಿಕ್ಕೆ ಸಾಧ್ಯವಿಲ್ಲ ಎಂಬುದನ್ನು ಮನಗಂಡು ಮುಖ್ಯವಾಗಿ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದರ ಮೂಲಕ ಅವರ ಕುಟುಂಬ ಉಜ್ವಲವಾಗಿ ಬೆಳೆಯುವುದಕ್ಕೆ ಕಾರಣರಾಗುತ್ತಾರೆ ಎನ್ನುವ ಮುಂದಾಲೋಚನೆ ನಮ್ಮ ಹಿರಿಯ ಗುರುಗಳಿಗೆ ಇತ್ತು ಎಂದರು.
6 ರಿಂದ 7 ತಿಂಗಳ ಕಾಲ ಸಿರಿಗೆರೆ ಸಮೀಪದ ಶಾಂತಿವನದಲ್ಲಿ ನಾವು ರೈತರ, ಭಕ್ತರ ಹಿತಚಿಂತನೆಯಲ್ಲದೇ, ಅಲ್ಲಿ ಜಾನುವಾರುಗಳ ಪಾಲನೆ ಮಾಡುತ್ತಿದ್ದೆವು. ಅನೇಕ ಭಕ್ತರು ಈ ಸಂದರ್ಭದಲ್ಲಿ ಕೊರೊನಾ ವೈರಾಣುವಿನಿಂದ ಸಾವನ್ನಪ್ಪಿದ್ದು ದುಃಖ ತಂದಿದೆ ಎಂದರು.