ನವದೆಹಲಿ: ಯುಜಿಸಿ ಮಾರ್ಗಸೂಚಿ ಪ್ರಕಾರ ಪ್ರಥಮ ವರ್ಷದ ಪದವಿ ಕಾಲೇಜುಗಳು ನ. 1 ರಿಂದ ಪ್ರಾರಂಭವಾಗಲಿವೆ. 2020ರ ಅಕ್ಟೋಬರ್ ವೇಳೆಗೆ ಮೆರಿಟ್ , ಪ್ರವೇಶ ಆಧಾರಿತ ಪ್ರವೇಶ ಪ್ರಕ್ರಿಯೆ ಪೂರ್ಣಗೊಳಿಸಲು ಶಿಕ್ಷಣ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ.
ಅರ್ಹತಾ ಪರೀಕ್ಷೆಗಳ ಫಲಿತಾಂಶ ಘೋಷಣೆಯಾಗುವುದು ವಿಳಂಬವಾದರೆ, ವಿಶ್ವವಿದ್ಯಾಲಯಗಳು ನವೆಂಬರ್ 18 ರಿಂದಲೇ ಶೈಕ್ಷಣಿಕ ವರ್ಷದ ತರಗತಿಗಳನ್ನು ಆರಂಭಿಸಬಹುದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಕೇಂದ್ರದ ಶಿಕ್ಷಣ ಸಚಿವ ರಮೇಶ್ ಪೋಕ್ರಿಯಾಲ್ ನಿಶಾಂಕ್ ಟ್ವೀಟ್ ಮಾಡಿ, ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ 2020-21ರ ಶೈಕ್ಷಣಿಕ ವರ್ಷಕ್ಕಾಗಿ ಯುಜಿ ಮತ್ತು ಪಿಜಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಮತ್ತು ಶೈಕ್ಷಣಿಕ ವೇಳಾಪಟ್ಟಿ ಕುರಿತು ಯುಜಿಸಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ ಎಂದು ತಿಳಿಸಿದ್ದಾರೆ.
ಉಳಿದ ಖಾಲಿ ಸ್ಥಾನಗಳನ್ನು ಭರ್ತಿ ಮಾಡಲು ನವೆಂಬರ್ 30 ಪ್ರವೇಶಕ್ಕೆ ಕೊನೆದಿನವಾಗಿರುತ್ತದೆ ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ಪ್ರವೇಶ ಪರೀಕ್ಷೆಗಳ ಮೂಲಕವೇ ಪ್ರವೇಶ ಪಡೆಯುವ ಮತ್ತು ಅಗತ್ಯವಿರುವ ಕ್ರಮಗಳನ್ನು ಪೂರ್ಣಗೊಳಿಸಿದ ಅಥವಾ ಭವಿಷ್ಯದಲ್ಲಿ ಹಾಗೆ ಮಾಡುವ ಸಾಧ್ಯತೆ ಇರುವ ಸಂಸ್ಥೆಗಳು, ಮೊದಲ ವರ್ಷದ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷದ ತರಗತಿಗಳನ್ನು ಆದಷ್ಟು ಬೇಗ ಪ್ರಾರಂಭಿಸಲು ನಿರ್ದೇಶಿಸಲಾಗಿದೆ.
2021 ರ ಮಾರ್ಚ್ 8ರಿಂದ 26ರ ನಡುವೆ ಮೊದಲ ಸೆಮಿಸ್ಟರ್ / ವರ್ಷದ ಪರೀಕ್ಷೆಗಳನ್ನು ನಡೆಸಲು ಯುಜಿಸಿ ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಿದೆ. 2020-21 ಮತ್ತು 2021-22ರ ಶೈಕ್ಷಣಿಕ ವರ್ಷಗಳಿಗೆ ಆರು ದಿನಗಳ ವಾರದ ಮಾದರಿಯನ್ನು ಅನುಸರಿಸಲು ವಿಶ್ವವಿದ್ಯಾಲಯಗಳನ್ನು ಕೇಳಿದೆ, ಜೊತೆಗೆ ತರಗತಿಗಳ ನಷ್ಟವನ್ನು ಸರಿದೂಗಿಸಲು ವಿರಾಮಗಳನ್ನು ಕಡಿತಗೊಳಿಸಲು ಸೂಚಿಸಿದೆ.