Connect with us

Dvgsuddi Kannada | online news portal | Kannada news online

ಆಲೂಗಡ್ಡೆಯನ್ನು ಸುಧಾರಿತ ಬೇಸಾಯ ಕ್ರಮದಲ್ಲಿ ಬೆಳೆಯುವುದು ಹೇಗೆ ..?

ಕೃಷಿ ಖುಷಿ

ಆಲೂಗಡ್ಡೆಯನ್ನು ಸುಧಾರಿತ ಬೇಸಾಯ ಕ್ರಮದಲ್ಲಿ ಬೆಳೆಯುವುದು ಹೇಗೆ ..?

ಸುಧಾರಿತ ಬೇಸಾಯ ಕ್ರಮದ ಮೂಲಕ ನಾವು ಆಲೂಗಡ್ಡೆಯನ್ನು ಬೆಳೆಯಬಹುದಾಗಿದೆ. ಈ ಬೆಳಯನ್ನು ಬೆಳೆಯಬೇಕಾದರೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳೇನು..?  ಮಣ್ಣು, ಹವಾಗುಣ, ತಳಿ ಹೇಗಿರಬೇಕು ಎಂಬುದರ  ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಮಣ್ಣುಆಲೂಗಡ್ಡೆಯನ್ನು ವಿವಿಧ ಮಣ್ಣುಗಳಲ್ಲಿ ಬೆಳೆಯಲಾರುತ್ತದೆ. ಆದರೆ ನೀರು ಬಸಿದು ಹೋಗುವಂತಹ ಕೆಂಪು ಗೋಡು ಮತ್ತು ಮರಳು ಮಿಶ್ರಿತ ಗೋಡು ಮಣ್ಣಿನ ಪ್ರದೇಶದಲ್ಲಿ ಈ ಬೆಳೆಯನ್ನು ಯಶಸ್ವಿಯಾಗಿ ಬೆಳೆಯಬಹುದು. ಚೌಳು ಮತ್ತು ಜೇಡಿ ಮಣ್ಣುಗಳು ಈ ಬೆಳೆಗೆ ಯೋಗ್ಯವಲ್ಲ ಮತ್ತು ಸೂಕ್ತವಾದ ಮಣ್ಣಿನ ರಸಸಾರ 5.5 ರಿಂದ 7.0 ರವರೆಗೆ ಆಗಿರುತ್ತದೆ.

ಹವಾಗುಣ: ಆಲೂಗಡ್ಡೆ ತಂಪು ವಾತಾವರಣ ಬಯಸುವ ಬೆಳೆಯಾಗಿದ್ದು ಗಡ್ಡೆ ಬೆಳವಣಿಗೆಯ ಸಮಯದಲ್ಲಿ 20 ಸೆಲ್ಸಿಯಸ್‍ಕ್ಕಿಂತ ಕಡಿಮೆ ಇದ್ದರೆ ಗಡ್ಡೆಗಳು ಚೆನ್ನಾಗಿ ಕಟ್ಟುತ್ತದೆ. ಈ ಹಂತದಲ್ಲಿ ಉಷ್ಣಾಂಶ 30 ಸೆಲ್ಸಿಯಸ್‍ಕ್ಕಿಂತ ಜಾಸ್ತಿ ಇದ್ದಲ್ಲಿ ಗಡ್ಡೆಯ ಬೆಳವಣಿಗೆ ಸಂಪೂರ್ಣ ನಿಂತು ಹೋಗುತ್ತದೆ. ಆಲೂಗಡ್ಡೆಯ ಬೆಳವಣಿಗೆಯ ಹಂತದಲ್ಲಿ ದೀರ್ಘಾವಧಿ ಹಗಲು ಮತ್ತು ಗಡ್ಡೆಯಾಗುವ ಹಂತದಲ್ಲಿ ಅಲ್ಪಾವಧಿ ಹಗಲು ಇದ್ದರೆ ಹೆಚ್ಚಿನ ಇಳುವರಿಯನ್ನು ಪಡೆಯಬಹುದು.

ಬಿತ್ತನೆಯ ಕಾಲಜಿಲ್ಲೆಯಲ್ಲಿ ಅಲೂಗಡ್ಡೆ ಬೆಳೆಯನ್ನು ನೀರಾವರಿ ಬೆಳೆಯನ್ನಾಗಿ ಬೆಳೆಯಲಾಗುತ್ತಿದೆ. ಬಿತ್ತನೆಯನ್ನು ಅಕ್ಟೋಬರ್, ನವೆಂಬರ್, ಡಿಸೆಂಬರ್ ತಿಂಗಳುಗಳಲ್ಲಿ ಹಿಂಗಾರು ಬೆಳೆಯನ್ನಾಗಿ ಬೆಳೆಯಲಾಗುತ್ತಿದೆ. ಭೂಮಿಯಲ್ಲಿ ಉಷ್ಣಾಂಶ ಜಾಸ್ತಿ ಇದ್ದ ಸಮಯದಲ್ಲಿ ಬಿತ್ತನೆ ಮಾಡಿದರೆ ಗಡ್ಡೆ ಕೊಳೆಯುವುದು ಜಾಸ್ತಿಯಾಗಿ, ಮೊಳಕೆ ಪ್ರಮಾಣ ಕಡಿಮೆಯಾಗುತ್ತದೆ.

ತಳಿಗಳುಜಿಲ್ಲೆಯಲ್ಲಿ ಹಲವಾರು ತಳಿಗಳು ಪ್ರಚಲಿತದಲ್ಲಿದ್ದರೂ ಕುಫ್ರಿ ಹಾಗೂ ಜ್ಯೋತಿ ತಳಿಗಳು ಬಹಳ ಪಾಲು ಆವರಿಸಿದೆ. ಸ್ವಲ್ಪ ಭಾಗಗಳಲ್ಲಿ ಕುಫ್ರಿ ಜ್ಯೋತಿ, ಕುಫ್ರಿ ಚಂದ್ರಮುಖಿ, ಕುಫ್ರಿ ಪುಕರಾಜ್, ಕುಫ್ರಿ ಚಿಪ್‍ಸೋನಾ-1 ಇನ್ನಿತರ ತಳಿಗಳನ್ನು ಕಾಣಬಹುದು.

ಬಿತ್ತನೆ ಗಡ್ಡೆಗಳ ಆಯ್ಕೆ: ಆಲೂಗಡ್ಡೆ ಮುಖ್ಯವಾಗಿ ಗಡ್ಡೆಯಿಂದ ಸಸ್ಯಾಭಿವೃದ್ದಿಯಾಗುವ ಬೆಳೆ. ಈ ಗಡ್ಡೆಗಳಿಂದ ಅನೇಕ ರೋಗಗಳು ಹರಡುವುದಾದರೂ ಅತಿ ಮುಖ್ಯವಾಗಿ ಎರಡು ರೋಗಗಳ ಬಗ್ಗೆ ಬಹಳ ಜಾಗರೂಕರಾಗಿರಬೇಕಾಗುತ್ತದೆ. ಅವುಗಳೆಂದರೆ ಎಲೆ ಮುದುಡು ರೋಗ ಮತ್ತು ಸೊರಗು ರೋಗ. ಇವುಗಳು ಗಡ್ಡೆಯ ಮುಖಾಂತರ ರೋಗ ಹರಡಿ ಇಳುವರಿಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಹಾಗೂ ಕೆಲವೊಮ್ಮೆ ಬೆಳೆ ಸಂಪೂರ್ಣ ನಾಶವಾಗುತ್ತದೆ. ಈ ಹಿನ್ನೆಲೆಯಲ್ಲಿ ಬಿತ್ತನೆಯ ಗಡ್ಡೆಗಳು ದೊರಕುವ ಮೂಲದ ಬಗ್ಗೆ  ರೈತರು ತಿಳಿದುಕೊಳ್ಳುವುದು ಬಹಳ ಸೂಕ್ತ. ನಮ್ಮ ಜಿಲ್ಲೆಗೆ ಬೇಕಾದ ಬಿತ್ತನೆ ಗಡ್ಡೆಗಳು ಹಿಮಾಚಲ ಪ್ರದೇಶ, ಪಂಜಾಬ್ ಮತ್ತು ಉತ್ತರ ಪ್ರದೇಶದ ಕೆಲವು ಭಾಗಗಳಿಂದ ಪಡೆಯಬೇಕಾಗುತ್ತದೆ.

ಇಲ್ಲಿಯೂ ಕೂಡ ಬೀಜದ ಗಡ್ಡೆಗಳನ್ನು ಶಿಫಾರಸ್ಸು ಮಾಡಿದ ಸಮಯದಲ್ಲಿ ಬೆಳೆದಂತ ಗಡ್ಡೆಗಳನ್ನು ನಾವು ಪಡೆಯಬೇಕಾಗುತ್ತದೆ ಮತ್ತು ಬಿತ್ತನೆ ನಿಯಮಗಳೆಲ್ಲವನ್ನು ಪಾಲಿಸಿ ಬೆಳೆದ ಗಡ್ಡೆಗಳು  ಸೂಕ್ತವಾದ ಬಿತ್ತನೆ ಗಡ್ಡೆಗಳಾಗುತ್ತದೆ. ಯಾವುದೇ ಕಾರಣಕ್ಕೂ ನಮ್ಮ ರಾಜ್ಯದ ಇತರೆ ಭಾಗಗಳಲ್ಲಿ ಬೆಳೆದಂತ ಗಡ್ಡೆಗಳನ್ನು ಉಪಯೋಗಿಸಬಾರದು. ಈ ಎಲ್ಲಾ ಕಾರಣಗಳಿಂದ ಬಿತ್ತನೆ ಗಡ್ಡೆಗಳನ್ನು ರಾಷ್ಟ್ರೀಯ ಬೀಜ ನಿಗಮ, ರಾಜ್ಯ ಬೀಜ ನಿಗಮ ಇಲ್ಲವೆ ಸಹಕಾರಿ ಸಂಘ ಸಂಸ್ಥೆಗಳ ಮತ್ತು ವಿಶ್ವಾಸಾರ್ಹ ಮೂಲಗಳಿಂದ ಪಡೆಯಬಹುದಾಗಿದೆ.

ಬೀಜೋಪಚಾರಬಿತ್ತನೆ ಗಡ್ಡೆಗಳನ್ನು ಖರೀದಿಸಿದ ಮೇಲೆ ನೇರವಾಗಿ ನಾಟಿ ಮಾಡುವುದಕ್ಕೆ ಉಪಯೋಗಿಸದೆ ತಂಪಾಗಿರುವ ನೆರಳಿನ ಪ್ರದೇಶದಲ್ಲಿ ಗಾಳಿಯಾಡುವಂತೆ ಹರಡುವುದು. ನಂತರ ದಬ್ಬದಾದ ಉಬ್ಬಿದ ಕಣ್ಣುಗಳು ಮೂಡಿದಾಗ ಗಡ್ಡೆಗಳನ್ನು ಬೇರ್ಪಡಿಸಿ ಬಿತ್ತನೆ ಸ್ಥಳಕ್ಕೆ ಸಾಗಿಸಬೇಕು. ಗಡ್ಡೆಗಳನ್ನು ಉದ್ದುದ್ದವಾಗಿ ಸುಮಾರು 35-40 ಗ್ರಾಂ ತೂಕದ್ದಾಗಿದ್ದು ಕನಿಷ್ಠ ಎರಡು ಕಣ್ಣುಗಳಿರುವಂತೆ ಕತ್ತರಿಸಬೇಕು. ಕತ್ತರಿಸುವಾಗ ಆಗಾಗ್ಗೆ ಶೇ.10 ರ ಫಾರ್ಮಾಲಿನ್ ದ್ರಾವಣದಲ್ಲಿ ಕುಡುಗೋಲನ್ನು ಅದ್ದುವುದರಿಂದ ದುಂಡಾಣುವಿನಿಂದ ಬರುವ ಸೊರಗು ರೋಗ ಹರಡುವುದನ್ನು ತಪ್ಪಿಸಬಹುದು. ಕತ್ತರಿಸಿದ ತುಂಡುಗಳನ್ನು ಶೇ.0.4 ಮ್ಯಾಂಕೋಜೆಬ್ (4 ಗ್ರಾಂ. ಪ್ರತಿ ಲೀಟರ್ ನೀರಿಗೆ) ದ್ರಾವಣದಲ್ಲಿ 5-10 ನಿಮಿಷಗಳ ಕಾಲ ನೆನೆಸಬೇಕು. ನಂತರ ನೆರಳಿನಲ್ಲಿ ಆರಿಸಿ ಬಿತ್ತನೆ ಮಾಡುವುದು. ಹೆಕ್ಟೇರ್‍ಗೆ 1000-1250 ಕಿ.ಗ್ರಾಂ ಬಿತ್ತನೆ ಗಡ್ಡೆ ಬೇಕಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 7829512236. ಅಥವಾ ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರ (ಹಾರ್ಟಿಕ್ಲಿನಿಕ್)ವನ್ನು ಸಂಪರ್ಕಿಸಬಹುದಾಗಿದೆ.
 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಕೃಷಿ ಖುಷಿ

To Top