ಡಿವಿಜಿ ಸುದ್ದಿ, ಬೆಂಗಳೂರು: ಡ್ರಗ್ಸ್ ಹಗರಣದಲ್ಲಿ ಪೊಲೀಸರು ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಪ್ರಮುಖ ಆರೋಪಿಗಳನ್ನು ಬಂಧಿಸಿದಂತೆ ಅವರಿಗೆ ಸರ್ಕಾರ ಒತ್ತಡ ಹೇರುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಗರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು. ಹೈಕೋರ್ಟ್‍ನ ಹಾಲಿ ನ್ಯಾಯಮೂರ್ತಿಯ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.
ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ದೇಶದ ಆರ್ಥಿಕ ಸ್ಥಿತಿ ದಿವಾಳಿಯಾಗಿದೆ. ನೋಟು ಅಮಾನ್ಯ, ಅವೈಜ್ಞಾನಿಕ ಜಿಎಸ್‌ಟಿ, ಕೆಟ್ಟ ಹಣಕಾಸು. ಜಿಡಿಪಿ ಕುಸಿತ ಕಂಡಿದೆ. ಇದರಿಂದ ಉದ್ಯೋಗ ಸೃಷ್ಟಿ ಆಗುತ್ತಿಲ್ಲ. ಉದ್ಯೋಗಗಳೂ ಕಡಿತವಾಗುತ್ತಿವೆ.
ಸೂಕ್ಷ್ಮ, ಸಣ್ಣ, ಅತಿ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು ಮುಚ್ಚಿವೆ. ನಿರುದ್ಯೋಗ ಪ್ರಮಾಣ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಯುವಕರು ಜೀವನವೇ ಬೇಡ ಎನ್ನುವ ಹಂತ ತಲುಪಿದ್ದಾರೆ. ಪ್ರತಿವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಪ್ರಧಾನಿ ನೀಡಿದ್ದ ಭರವಸೆ ಹುಸಿಯಾಗಿದೆ ಎಂದರು.



