ಡಿವಿಜಿ ಸುದ್ದಿ, ಬೆಂಗಳೂರು: ರಾಜ್ಯದಲ್ಲಿನ ಡ್ರಗ್ಸ್ ಮಾಫಿಯಾ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು, ಇಂದು ನಟಿ ಸಂಜನಾ ಅವರನ್ನು ಬಂಧಿಸಿ ಹೆಚ್ಚಿನ ವಿಚಾರಣೆಗಾಗಿ ಐದು ದಿನ ಕಸ್ಟಡಿಗೆ ಪಡೆದುಕೊಂಡಿದ್ದಾರೆ.
ಇಂದಿರಾನಗರದ ಸಂಜನಾ ಮನೆ ಮೇಲೆ ಬೆಳಗ್ಗೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದರು. ಮನೆಯಲ್ಲಿ ಕೆಲ ವಸ್ತುಗಳನ್ನು ಜಪ್ತಿ ಮಾಡಿದ್ದರು. ನಂತರ ಮನೆಯಲ್ಲಿ 4 ಗಂಟೆ ವಿಚಾರಣೆ ನಡೆಸಿದ ಪೊಲೀಸರು, ಹೆಚ್ಚಿನ ವಿಚಾರಣೆಗೆ ಸಿಸಿಬಿ ಕಚೇರಿಗೆ ಕರೆತಂದಿದ್ದರು.

ಸಂಜನಾ ಹೇಳಿಕೆ ಪಡೆದುಕೊಂಡ ನಂತರ ಬಂಧಿಸಿ ಎಂಟನೇ ಎಸಿಎಂಎಂ ನ್ಯಾಯಾಧೀಶರ ಎದುರು ಹಾಜರುಪಡಿಸಿದರು. ಸಂಜನಾ ಅವರು ಡ್ರಗ್ಸ್ ಮಾಫಿಯಾದಲ್ಲಿ ಭಾಗಿಯಾಗಿರುವ ಮಾಹಿತಿ ಇದ್ದು, ಸಂಜನಾ ಅವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಬೇಕಿದೆ. ಅವರನ್ನು ಕಸ್ಟಡಿಗೆ ನೀಡಬೇಕು’ಎಂದು ಸಿಸಿಬಿ ಪೊಲೀಸರು ನ್ಯಾಯಾಧೀಶರಿಗೆ ಮನವಿ ಮಾಡಿದರು.
ಸಿಸಿಬಿ ಮನವಿಗೆ ಒಪ್ಪಿಗೆ ಸೂಚಿಸಿದ ನ್ಯಾಯಾಧೀಶರು, ಸಂಜನಾ ಅವರನ್ನು 5 ದಿನ ಸಿಸಿಬಿಯ ಕಸ್ಟಡಿಗೆ ನೀಡಿದರು. ಇದಕ್ಕೂ ಮೊದಲು ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಕೊರೊನಾ ಹಾಗೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು.




