ಡಿವಿಜಿ ಸುದ್ದಿ , ಬೆಂಗಳೂರು: ಕೊರೊನಾ ವೈರಸ್ ಹಿನ್ನೆಲೆ ಈ ಬಾರಿ ದಸರಾ ಮಹೋತ್ಸವವನ್ನು ಸರಳವಾಗಿ ಆಚರಿಸಲಾಗುವುದು ಮತ್ತು ಅರಮನೆ ಆವರಣದಲ್ಲಿ ಮಾತ್ರ ಜಂಬೂ ಸವಾರಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ದಸರಾ ಉನ್ನತ ಮಟ್ಟದ ಸಮಿತಿ ಸಭೆಯ ಬಳಿಕ ಮಾತನಾಡಿದ ಅವರು, ಸಾಂಪ್ರದಾಯಿಕ ಆಚರಣೆಯನ್ನು ಕೈ ಬಿಡದೆ, ವೈಭವಕ್ಕೆ ಕಡಿವಾಣ ಹಾಕುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತವಾಯಿತು. ಹೆಚ್ಚಿನ ಜನರು ಸೇರದಂತೆ ಸಾಂಕೇತಿಕ ಆಚರಣೆಗೆ ಮಾತ್ರ ಅವಕಾಶ ನೀಡಲಾಗುವುದು ಎಂದರು.
ದಸರಾ ಆಚರಣೆಗೆ 10 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ. ಆಹಾರ ಮೇಳ, ಕ್ರೀಡೆ, ಯುವ ದಸರಾ ಮುಂತಾದ ಕಾರ್ಯಕ್ರಮ ಈ ಬಾರಿ ಇರುವುದಿಲ್ಲ. ಗಜಪಡೆಯನ್ನು 5ಕ್ಕೆ ಸೀಮಿತಗೊಳಿಸಲು ತೀರ್ಮಾನಿಸಲಾಗಿದೆ.
ನಾಡದೇವತೆ ಚಾಮುಂಡೇಶ್ವರಿಯ ಅಗ್ರಪೂಜೆ ಮತ್ತು ದಸರಾ ಉದ್ಘಾಟನೆಯನ್ನು ಕೋವಿಡ್ -19 ನಿರ್ಮೂಲನೆಗಾಗಿ ಶ್ರಮಿಸಿದ ವೈದ್ಯರು, ನರ್ಸ್, ಆಶಾ ಕಾರ್ಯಕರ್ತರು, ಪೌರ ಕಾರ್ಮಿಕರು ಹಾಗೂ ಪೊಲೀಸರಿಂದ ನೆರವೇರಿಸಲಾಗುವುದು. ಜಂಬೂ ಸವಾರಿಯನ್ನು ಅರಮನೆ ಆವರಣದಲ್ಲಿ ಮಾತ್ರ ನಡೆಸುವುದು.ಮೈಸೂರು ನಗರದಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲು ತೀರ್ಮಾನಿಸಲಾಯಿತು ಎಂದರು.



