ಡಿವಿಜಿ ಸುದ್ದಿ, ಬೆಂಗಳೂರು: ಸೆಪ್ಟೆಂಬರ್ ತಿಂಗಳಿಂದ ಪದವಿ ಕಾಲೇಜುಗಳ ಶೈಕ್ಷಣಿಕ ವರ್ಷ ಪ್ರಾರಂಭವಾಗಲಿದ್ದು, ಅಂತಿಮ ವರ್ಷದ ಎಲ್ಲ ಪದವಿ, ಡಿಪ್ಲೊಮಾ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಡಿಸಿಎಂ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.
ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಪದವಿ ಪರೀಕ್ಷೆ ಜೊತೆ ಬ್ಯಾಕ್‌ಲಾಗ್ ಉಳಿಸಿಕೊಂಡಿರುವ ವಿದ್ಯಾರ್ಥಿಗಳಿಗೂ ಪರೀಕ್ಷೆ ನಡೆಸಲಾಗುವುದು. ಯಾವುದೇ ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆ ಉಂಟಾಗಬಾರದು ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸಿದರು.
ಸರಕಾರವು ರಾಜ್ಯದಲ್ಲಿ 1.94 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಯಶಸ್ವಿಯಾಗಿ ಸಿಇಟಿ ಪರೀಕ್ಷೆ ಬರೆಸಿದೆ. ಅದರ 63 ಮಂದಿ ಕೋವಿಡ್ ಪಾಸಿಟಿವ್ ವಿದ್ಯಾರ್ಥಿಗಳು ಕೂಡ ಆತ್ಮಸ್ಥೈರ್ಯದಿಂದ ಪರೀಕ್ಷೆ ಬರೆದು ಉತ್ತಮ ರ್ಯಾಂಕ್ ಪಡೆದಿದ್ದಾರೆ. ಕೆಲವರು ನೀಟ್ ಪರೀಕ್ಷೆ ಯಾಕೆ ಬೇಡ ಅನ್ನುತ್ತಿದ್ದಾರೋ ಗೊತ್ತಿಲ್ಲ. ಅ ಯಾರೂ ಕೂಡ ಮಕ್ಕಳ ಭವಿಷ್ಯದ ಜತೆ ಚೆಲ್ಲಾಟ ಆಡಬಾರದು ಎಂದು ತಿಳಿಸಿದರು.
ಮೆರಿಟ್ ಮೂಲಕ ಸೀಟು ಸಿಗಬಾರದು, ವ್ಯವಸ್ಥಿತವಾಗಿ ಸೀಟು ಹಂಚಿಕೆಯಾಗಬಾರದು ಎಂಬ ದುರುದ್ದೇಶ ಇದ್ದಂತೆ ಕಾಣುತ್ತಿದೆ. ಕೆಲ ಪಟ್ಟಭದ್ರ ಹಿತಾಸಕ್ತಿಗಳು ಮೊದಲಿನಿಂದಲೂ ನೀಟ್ ಪರೀಕ್ಷೆಗೆ ಅಡ್ಡಿಪಡಿಸುತ್ತದ್ದಾರೆ. ನೀಟ್ ಪರೀಕ್ಷೆ ಅತ್ಯುತ್ತಮವಾಗಿದೆ. ಒಂದು ಪರೀಕ್ಷೆ ಮೂಲಕ ದೇಶದ ವಿವಿಧೆಡೆ ಪ್ರವೇಶ ಪಡೆಯುವ ಪದ್ಧತಿ ಇದಾಗಿದೆ. ಈ ಪರೀಕ್ಷೆ ನಡೆಯಲೇಬೇಕು ಎಂದರು.



