ಡಿವಿಜಿ ಸುದ್ದಿ, ಬೆಂಗಳೂರು: ನನ್ನ ಫೋನ್ ಟ್ಯಾಪ್ ಆಗುತ್ತಿದೆ. ಇವತ್ತು ಬೆಳಗ್ಗೆಯಿಂದ ಕರೆ ಬರುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸರ್ಕಾರದ ವಿರುದ್ಧ ಟ್ಯಾಪಿಂಗ್ ಆರೋಪ ಮಾಡಿದರು.
ಸುದ್ದಿಗಾರೊಂದಿಗೆ ಮಾತನಾಡಿದ ಅವರು, ನನ್ನ ಫೋನ್ ಟ್ಯಾಪಿಂಗ್ ಆಗುತ್ತಿರುವುದು ನಿಜ. ಈ ಹಿಂದೆಯೂ ಫೋನ್ ಟ್ಯಾಪ್ ಆಗಿತ್ತು. ಈಗ ಮತ್ತೆ ಆಗಿದೆ. ಈ ಬಗ್ಗೆ ದೂರು ನೀಡುತ್ತೇನೆ ಎಂದು ತಿಳಿಸಿದರು.
ಬೆಂಗಳೂರು ಗಲಭೆ ಪ್ರಕರಣದಲ್ಲಿ ಗೃಹ ಸಚಿವರ ಕಾರ್ಯ ವೈಖರಿ ಬಗ್ಗೆ ಕಿಡಿಕಾರಿದ ಡಿ.ಕೆ. ಶಿವಕುಮಾರ್, ಅಮಾಯಕರಿಗೆ ನೋಟಿಸ್ ಕೊಟ್ಟು ಅವರನ್ನು ಕರೆಯಿಸಿ ಅವರಿಗೆ ಬೆದರಿಕೆ ಹಾಕುತ್ತಿದ್ದಾರೆ. ತನಿಖೆ ಮಾಡಿ ಏನಿದೆ ಅದನ್ನು ತೆಗೆಯಬೇಕು ಎಂದರು.
ಕಳೆದ 30 ವರ್ಷ ದಿಂದ ರಾಜಕಾರಣ ನೋಡಿದ್ದೇವೆ. ನಮಗೆ ಗೃಹ ಇಲಾಖೆಯ ಬಗ್ಗೆ ಚೆನ್ನಾಗಿ ಗೊತ್ತಿದೆ. ನಾನು ಸಿಎಂ ಏನು ಹೇಳಿದ್ದಾರೆ ಗಮನಿಸಿದ್ದೇನೆ. ಅವರು ಹೇಳಿದಂತೆ ಎಲ್ಲಾದ್ರೂ ನಡೆದುಕೊಂಡಿದ್ದಾರಾ? ಯಾವುದೇ ಸರ್ಕಾರ ಶಾಶ್ವತ ಅಲ್ಲ, ಹರಿಯೋ ನೀರಿದ್ದಂತೆ. ಸರ್ಕಾರ ಬರುತ್ತೆ, ಸರ್ಕಾರ ಹೋಗುತ್ತೆ. ಆದರೆ, ನಿನ್ನೆ ಬರವಣಿಗೆಯಲ್ಲಿ ಕೊಡುವಂತೆ ಹುಡುಗನಿಗೆ ಬೆದರಿಕೆ ಹಾಕಿದ್ದಾರೆ ಎಂದು ತಿಳಿಸಿದರು.
ನಂಜನಗೂಡು ವೈದ್ಯಾಧಿಕಾರಿ ಆತ್ಮಹತ್ಯೆ ವಿಚಾರವಾಗಿ ಮಾತನಾಡಿ, ಕೊರೊನಾ ಸಂದರ್ಭದಲ್ಲಿ ಹೆಲ್ತ್ ವರ್ಕರ್ಸ್ ಪ್ರಾಣ ಒತ್ತೆ ಇಟ್ಟು ಸೇವೆ ಮಾಡುತ್ತಿದ್ದಾರೆ. ಅವರ ಸೇವೆಗೆ ಎಷ್ಟು ಗೌರವ ಕೊಟ್ಟರೂ ಸಾಲದು. ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು. ಕಳೆದ 6 ತಿಂಗಳಿನಿಂದ ಅಧಿಕಾರಿಗೆ ಹಿಂಸೆ ನೀಡಿದ್ದಾರೆ. ಕೆಲಸ ಮಾಡೋಕೆ ಸರಿಯಾಗಿ ಅವಕಾಶ ಕೊಟ್ಟಿಲ್ಲ. ಅವರು ಆತ್ಮಹತ್ಯೆ ಮಾಡಿಕೊಳ್ಳೋಕೆ ದಾರಿ ಮಾಡಿಕೊಟ್ಟಿದ್ದಾರೆ. ಸರ್ಕಾರ ಇಲ್ಲಿವರೆಗೂ ಸುಮೋಟೋ ಕೇಸ್ ಹಾಕಿಲ್ಲ. ಆದರೆ ಸರ್ಕಾರ ಈ ಪ್ರಕರಣದಲ್ಲಿ ಹಿಂದೇಟು ಹಾಕುತ್ತಿದೆ. ಅಧಿವೇಶನ ಕರೆದಿದ್ದಾರೆ. ಅಲ್ಲಿ ಚರ್ಚೆ ಮಾಡ್ತೇವೆ ಎಂದರು.