ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರು ಕೊರೊನಾದಿಂದ ಗುಣಮುಖರಾಗಿದ್ದು, ಇಂದು ಜಿಲ್ಲಾ ಆಸ್ಪತ್ರೆಯಿಂದ ಬಿಡುಗಡೆಯಾದರು.
ಆ.1 ರಂದು ಎಸ್.ಪಿ. ಹನುಮಂತರಾಯ ಅವರಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ಎಸ್ ಪಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಇಂದು ಕೊವೀಡ್ -19 ನಿಂದ ಗುಣಮುಖರಾದ ಹಿನ್ನೆಲೆ ಜಿಲ್ಲಾ ಆಸ್ಪತ್ರೆಯಿಂದ ಬಿಡುಗಡೆಯಾದರು. ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಎಸ್ ಪಿ ಅವರಿಗೆ ಜಿಲ್ಲಾಸ್ಪತ್ರೆಯಿಂದ ಬಿಳ್ಕೊಟ್ಟರು.

ಎಸ್ ಪಿ ಹನುಮಂತರಾಯ ಅವರು ವೈದ್ಯರ ಸಲಹೆ ಮೇರೆಗೆ ಇನ್ನು ಸ್ವಲ್ಪ ದಿನ ಹೋಮ್ ಕ್ವಾರೆಂಟೈನ್ ನಲ್ಲಿ ಇರಲಿದ್ದಾರೆ. ಎಸ್ .ಪಿ. ಅವರು ಪ್ರಾಥಮಿಕ ಸಂಪರ್ಕದಲ್ಲಿದ್ದ ಜಿಲ್ಲಾಧಿಕಾರಿಗಳು ಸಹ ಹೋಮ್ ಕ್ವಾರೆಂಟೈನ್ ನಲ್ಲಿದ್ದರು.
ಬಿಡುಗಡೆ ನಂತರ ಮಾತನಾಡಿದ ಎಸ್ .ಪಿ ಹನುಮಂತರಾಯ, ನನಗೆ ಆ.01 ರಂದು ಕೊರೊನಾ ಪಾಸಿಟಿವ್ ಬಂದಿದೆ ಎಂಬ ವರದಿ ಬಂದ ನಂತರ, ಜಿಲ್ಲಾಧಿಕಾರಿಗಳ ಮಾರ್ಗದರ್ಶನದಂತೆ ಜಿಲ್ಲಾ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯಲು ನಿರ್ಧರಿಸಿದೆ. ಇದೊಂದು ಹೊಸ ಅನುಭವ. ಜಿಲ್ಲಾಸ್ಪತ್ರೆಯ ಡಾ. ನಾಗರಾಜ್, ಡಾ. ರವಿ, ಜೆಜೆಎಂ ಕಾಲೇಜಿನ ವೈದ್ಯ ವಿದ್ಯಾರ್ಥಿಗಳು, ನರ್ಸ್ ಸೇರಿದಂತೆ ಎಲ್ಲ ಸಿಬ್ಬಂದಿ ಉತ್ತಮ ರೀತಿಯಲ್ಲಿ ನೋಡಿಕೊಂಡಿದ್ದಾರೆ. ಇಲ್ಲಿನ ಊಟ, ವೈದ್ಯಕೀಯ ವ್ಯವಸ್ಥೆ ಉತ್ತಮವಾಗಿದೆ ಎಂದರು.
ಯಾರು ಕೂಡ ಕೊರೊನಾ ಬಂದಿದೆ ಎಂದು ಭಯಪಡುವ ಅಗತ್ಯವಿಲ್ಲ. ವೈದ್ಯರ ಸಲಹೆ, ಸರ್ಕಾರದ ಮಾರ್ಗ ಸೂಚಿಯನ್ನು ಸರಿಯಾಗಿ ಪಾಲನೆ ಮಾಡಿದರೆ, ಕೊರೊನಾದಿಂದ ಬೇಗ ಮುಕ್ತರಾಗಬಹುದು. ಹೀಗಾಗಿ ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿ ಎಲ್ಲರು ಪಾಲಿಸಬೇಕು. ಇದರ ಜತೆಗೆ ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡಿ ಎಂದರು. ವೈದ್ಯರು ಇನ್ನು ಸ್ವಲ್ಪ ದಿನ ಹೋಮ ಕ್ವಾರೆಂಟೈನ್ ನಲ್ಲಿ ಇರುವಂತೆ ಸೂಚನೆ ನೀಡಿದ್ದಾರೆ. ಹೀಗಾಗಿ ಕೊರೊನಾ ಮಾರ್ಗ ಸೂಚಿ ಅನ್ವಯ ಮುಂದಿನ ದಿನಗಳಲ್ಲಿ ಕೆಲಸಕ್ಕೆ ಹಾಜರಾಗುತ್ತೇನೆ ಎಸ್ ಪಿ ಹನುಮಂತರಾಯ ತಿಳಿಸಿದರು.



