ಡಿವಿಜಿ ಸುದ್ದಿ, ಯಾದಗಿರಿ: ಸ್ಟಾಫ್ ನರ್ಸ್ ನೇಮಕಾತಿ ವೇಳೆ ಅಭ್ಯರ್ಥಿಯೊಬ್ಬರಿಂದ 30 ಸಾವಿರ ಲಂಚ ಪಡೆಯುತ್ತಿರುವಾಗ ರೆಡ್ ಹ್ಯಾಂಡ್ ಆಗಿ ಯಾದಗಿರಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಖ್ಯಾಧಿಕಾರಿ(DHO) ಭ್ರಷ್ಟಾಚಾರ ನಿಗ್ರಹ ದಳ (ACB) ಬಲೆಗೆ ಬಿದ್ದಿದ್ದಾರೆ.
ಕೊರೊನಾ ಹಾವಳಿ ಹೆಚ್ಚಾಗಿರುವ ಹಿನ್ನೆಲೆ ಆರೋಗ್ಯ ಇಲಾಖೆಗೆ ಅಗತ್ಯ ಸಿಬ್ಬಂದಿಯ ಭರ್ತಿ ಮಾಡಿಕೊಳ್ಳಲು ಸರ್ಕಾರ ಆದೇಶ ಹೊರಡಿಸಿತ್ತು. ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಖ್ಯಾಧಿಕಾರಿ ಎಸ್.ಎಂ. ಪಾಟೀಲ್ ಭರ್ತಿ ಕಾರ್ಯದ ಮುಖ್ಯಸ್ಥರಾಗಿದ್ದರು. ನೇಮಕಾತಿಗಾಗಿ ಒಬ್ಬೊಬ್ಬ ಅಭ್ಯರ್ಥಿಯಿಂದ 30 ರಿಂದ 50 ಸಾವಿರ ಲಂಚದ ಬೇಡಿಕೆ ಇಟ್ಟಿರುವ ಬಗ್ಗೆ ಎಸಿಬಿಗೆ ದೂರುಗಳು ಬಂದಿದ್ದಿವು.
ಈ ಬಗ್ಗೆ ಖಚಿತಪಡಿಸಿಕೊಂಡ ಎಸಿಬಿ ಅಧಿಕಾರಿಗಳು, ಅಭ್ಯರ್ಥಿಯನ್ನು ಬಳಸಿಕೊಂಡು ಡಿಹೆಚ್‍ಓ ಲಂಚ ಸ್ವೀಕರಿಸುವಾಗ ದಾಳಿ ಮಾಡಿದ್ದಾರೆ. ದಾಳಿಯ ಬಳಿಕ ಡಿಹೆಚ್‍ಓ ಮತ್ತು ಇತರೆ ಅಧಿಕಾರಿಗಳನ್ನು ಎಸಿಬಿ ಅಧಿಕಾರಿಗಳು ತೀವ್ರವಾಗಿ ವಿಚಾರಣೆ ನಡೆಸಿದ್ದಾರೆ. ಈ ದಾಳಿಯಲ್ಲಿ ಯಾದಗಿರಿ ಮತ್ತು ಕಲಬುರಗಿ ಎಸಿಬಿ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ.



