ಡಿವಿಜಿ ಸುದ್ದಿ, ದಾವಣಗೆರೆ: ಈರುಳ್ಳಿ ಬೆಳೆಗೆ ಟ್ರೈಕೋಡರ್ಮಾ ಶಿಲೀಂದ್ರನಾಶಕವನ್ನು 5 ಮಿ.ಲೀ ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪಡಿಸಿರುವುದರಿಂದ ಮಳೆ ಹೆಚ್ಚಾದರೂ ಶಿಲೀಂದ್ರ ರೋಗಗಳ ಭಾದೆ ಕಡಿಮೆಯಾಗಿದೆ ಎಂದು ತೋಟಗಾರಿಕೆ ವಿಜ್ಞಾನಿ ಬಸವನಗೌಡ ಎಂ.ಜಿ. ತಿಳಿಸಿದರು.
ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ದಾವಣಗೆರೆ ಇವರ ವತಿಯಿಂದ ನ್ಯಾಮತಿ ತಾಲ್ಲೂಕು ರಾಮೇಶ್ವರ ಗ್ರಾಮದಲ್ಲಿ ಪಾರಂಪರಿಕ ಕೃಷಿ ವಿಕಾಸ ಯೋಜನೆಯಡಿ ಸಾವಯವ ಪರಿಕರಗಳ ಬಳಕೆ ಬಗ್ಗೆ ಪ್ರಾತ್ಯಕ್ಷಿಕೆ ಉದ್ದೇಶಿಸಿ ಮಾತನಾಡಿದರು.
ಅರ್ಕಾ ಸೂಕ್ಷ್ಮಾಣು ಜೀವಿಗಳ ಸಿಂಪರಣೆಯನ್ನು 5 ಮಿಲೀ ಪ್ರತೀ ಲೀಟರ್ ನೀರಿನಲ್ಲಿ ಬೆರಸಿ ಸಿಂಪಡಿಸಿದರೆ ಬೆಳೆಗೆ ನಿರೋಧಕತೆಯೂ ಹೆಚ್ಚುತ್ತದೆ ಎಂದು ತಿಳಿಸಿದರು. ರಸ ಹೀರುವ ಕೀಟಗಳ ಭಾದೆ ಹೆಚ್ಚಾದರೆ ಬೇವಿನ ಎಣ್ಣೆಯನ್ನು 5ಮಿಲೀ ಪ್ರತೀ ಲೀಟರ್ ನೀರಿನಲ್ಲಿ ಬೆರಸಿ ಸಿಂಪಡಿದಿದರೆ ಉತ್ತಮ ಎಂದು ಮಾಹಿತಿ ನೀಡಿದರು.
ಪಾರಂಪರಿಕ ಕೃಷಿ ವಿಕಾಸ ಯೋಜನೆಯಡಿ ಗ್ರಾಮದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಅವುಗಳಲ್ಲಿ ಎರೆಹುಳು ತೊಟ್ಟಿ ನಿರ್ಮಾಣ, ಜೀವಾಮೃತ ಘಟಕಗಳು, ಬೆಳೆಗಳಲ್ಲಿ ಜೈವಿಕ ಗೊಬ್ಬರಗಳ ಬಳಕೆ, ತೋಟಗಳಲ್ಲಿ ಹಸಿರೆಲೆ ಗೊಬ್ಬರಗಳ ಬಳಕೆ ಪ್ರಮುಖವಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಕೇಂದ್ರದ ಮಣ್ಣು ವಿಜ್ಞಾನಿ ಹೆಚ್. ಎಂ. ಸಣ್ಣಗೌಡ್ರ, ರೈತರಾದ ರಾಕೇಶ್, ಮಹೇಶ್ವರಪ್ಪ, ಮಲ್ಲಿಕಾರ್ಜುನಪ್ಪ, ತೀರ್ಥಲಿಂಗಪ್ಪ, ನಾಗರಾಜ್ ಉಪಸ್ಥಿತರಿದ್ದರು.



