ಡಿವಿಜಿ ಸುದ್ದಿ, ದಾವಣಗೆರೆ: ಶಿವಮೊಗ್ಗ ಜಿಲ್ಲೆ ಸುತ್ತಮುತ್ತ ಭಾರೀ ಮಳೆಯಾಗುತ್ತಿದೆ. ಈ ಹಿನ್ನೆಲೆ ತುಂಗಾಭದ್ರೆ ಮೈತುಂಬಿ ಹರಿಯುತ್ತಿದೆ. ಇದರಿಂದ ನದಿ ಪಾತ್ರದ ತಗ್ಗು ಪ್ರದೇಶದ ಜನರು ಈ ಕೂಡಲೇ ಮನೆಯನ್ನು ಖಾಲಿ ಮಾಡುವಂತೆ ಹೊನ್ನಾಳಿ ತಾಲೂಕು ಆಡಳಿತ ಸೂಚನೆ ನೀಡಿದೆ.
ಹೊನ್ನಾಳಿಯ ಪಟ್ಟಣದಲ್ಲಿ ಈಗಾಗಲೇ ತಗ್ಗು ಪ್ರದೇಶದಲ್ಲಿ ನೀರು ನುಗ್ಗುತ್ತಿದೆ. ಹೀಗಾಗಿ ಜನರು ಸ್ಥಳೀಯ ಗಂಜಿ ಕೇಂದ್ರಕ್ಕೆ ತೆರಳುವಂತೆ ಸೂಚನೆ ನೀಡಲಾಗಿದೆ.
ನದಿ ನೀರಿನ ಮಟ್ಟ ಕ್ಷಣಕ್ಕೂ ಹೆಚ್ಚಾಗುತ್ತಿದ್ದು ನದಿ ಪಾತ್ರದ ಮನೆಗಳಿಗೆ ನೀರು ನುಗ್ಗುವ ಸಾಧ್ಯತೆ ಹೆಚ್ಚಿದೆ. ಇದೇ ಪರಿಸ್ಥಿತಿ ಉಂಟಾದಲ್ಲಿ ನೆರೆ ಮತ್ತಷ್ಟು ಜಾಸ್ತಿಯಾವ ಸಾಧ್ಯತೆ ಇದೆ. ನೀರಿನ ಮಟ್ಟ ಏರಿಕೆಯಾದಲ್ಲಿ ಹರಿಹರದ ಸಾರಥಿ, ಉಕ್ಕಡಗಾತ್ರಿ, ಸೇರಿದಂತೆ ಅನೇಕ ಗ್ರಾಮಗಳ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆಯಿದೆ.
ಈಗಾಗಲೇ ತುಂಗಾ ಡ್ಯಾಂ ಭರ್ತಿಯಾಗಿದ್ದು, 22 ಗೇಟ್ ಗಳ ಮೂಲಕ 71 ಸಾವಿರ ಕ್ಯೂಸೆಕ್ಸ್ ನೀರು ಹೊರ ಬಿಡಲಾಗಿದ್ದು, ನೀರಿನ ಮಟ್ಟ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.



