ಡಿವಿಜಿ ಸುದ್ದಿ, ದಾವಣಗೆರೆ: ಫಿನಾಯಿಲ್ ಸೇರಿದಂತೆ ವಾಸನೆಯಂತಹ ದ್ರಾವಣ ಮಾರಾಟ ಮಾಡುವ ನೆಪದಲ್ಲಿ ಸಂಶಯಾಸ್ಪದ ಅಪರಿಚಿತ ಮಹಿಳೆಯರು ಮನೆ ಅಥವಾ ಓಣಿಗಳಲ್ಲಿ ಕಂಡು ಬಂದರೆ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಪೂರ್ವಾಪರ ತಿಳಿದುಕೊಳ್ಳದೇ, ಅಪರಿಚಿರೊಂದಿಗೆ ವ್ಯವಹರಿಸಬಾರದು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಹನುಮಂತರಾಯ ತಿಳಿಸಿದ್ದಾರೆ.
ಇತ್ತೀಚಿಗೆ ವಿಜಯಪುರ ಜಿಲ್ಲೆ ಗೋಲಗುಂಬಜ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆ.2ರಂದು ಮಧ್ಯಾಹ್ನ ಸುಮಾರು 30 ವರ್ಷದೊಳಗಿನ 6 ಜನ ಅಪರಿಚಿತ ಮಹಿಳೆಯರು ಫಿನಾಯಿಲ್ ಮಾರುವ ನೆಪದಲ್ಲಿ ಮನೆಗಳಿಗೆ ಹೋಗಿ, ಮನೆಯಲ್ಲಿರುವವರಿಗೆ ಫಿನಾಯಿಲ್ ಎಂದು ಯಾವುದೋ ದ್ರಾವಣದ ವಾಸನೆ ತೋರಿಸಿದ್ದಾರೆ. ಫಿನಾಯಿಲ್ ವಾಸನೆ ತೆಗೆದುಕೊಂಡ ಕ್ಷಣ ಮನೆಯವರು ಮೂರ್ಛೆ ಹೋಗಿದ್ದಾರೆ. ನಂತರ ಮನೆಯೊಳಗೂ ಪ್ರವೇಶ ಮಾಡಿ, ಅಲ್ಲಿರುವವರಿಗೂ ಮೂರ್ಛೆ ಹೋಗುವ ದ್ರಾವಣ ಸಿಂಪಡಿಸಿ ಮನೆಯಲ್ಲಿದ್ದ ಸುಮಾರು 4 ತೊಲೆಯಷ್ಟು ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿರುವ ಘಟನೆ ನಡೆದಿದೆ.
ಹೀಗಾಗಿ ದಾವಣಗೆರೆ ಜಿಲ್ಲೆಯ ಜನರು ಅಪರಿಚಿತ ವ್ಯಕ್ತಿಗಳು ಫಿನಾಯಿಲ್ ಹಾಗೂ ಇನ್ನಿತರ ದ್ರಾವಣ ಮಾರಾಟ ಮಾಡಲು ಬಂದಾಗ ವಾಸನೆ ತೆಗೆದುಕೊಳ್ಳದೇ ಎಚ್ಚರಿಕೆಯಿಂದ ಇರಬೇಕು. ಓಣಿಗಳಲ್ಲಿ ವಾಸನೆ ತೋರಿಸುವಂತಹ ಯಾವುದೇ ದ್ರಾವಣ ಮಾರಾಟ ಮಾಡುತ್ತಿರುವುದು ಕಂಡುಬಂದಲ್ಲಿ ಸಾರ್ವಜನಿಕರು ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ದೂರವಾಣಿ ಸಂಖ್ಯೆ ಪೊಲೀಸ್ ಕಂಟ್ರೋಲ್ ರೂಮ್ 08192-253100/100, 9480803200 ಗಳಿಗೆ ಮಾಹಿತಿ ನೀಡುವುದರ ಜೊತೆಗೆ ಜಾಗೃತಿಯಿಂದಿರಬೇಕು ಎಂದು ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.



