ಅಯೋಧ್ಯೆ: ಬಿಜೆಪಿಯ ಹಿರಿಯ ನಾಯಕಿ ಉಮಾ ಭಾರತಿ ಅವರು ಕೊರೊನಾ ವೈರಸ್ ಕಾರಣದಿಂದಾಗಿ ಅಯೋಧ್ಯೆಯಲ್ಲಿ ಆಗಸ್ಟ್ 5ರಂದು ನಡೆಯುವ ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮದಿಂದ ದೂರ ಉಳಿಯುವುದಾಗಿ ಹೇಳಿದ್ದಾರೆ.
ರಾಮ ಮಂದಿರ ಹೋರಾಟ ನಡೆಸಿದವ ಪ್ರಮುಖರಲ್ಲಿ ಒಬ್ಬರಾದ ಉಮಾ ಭಾರತಿ, ಅಯೋಧ್ಯೆಯಲ್ಲಿ ನಡೆಯುವ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದಿದ್ದಾರೆ. ತಾನು ಸರಯು ನದಿಯ ದಡದಲ್ಲಿ ಇರುತ್ತೇನೆ. ಭೂಮಿ ಪೂಜೆ ಕಾರ್ಯಕ್ರಮ ಮುಗಿದ ಬಳಿಕ ರಾಮ್ ಲಲ್ಲಾಗೆ ಪ್ರಾರ್ಥನೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಗೃಹ ಸಚಿವ ಅಮಿತ್ ಶಾ ಮತ್ತು ಉತ್ತರ ಪ್ರದೇಶದ ಕೆಲ ನಾಯಕರಿಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿರುವುದನ್ನು ನಾನು ಕೇಳಿದ್ದೇನೆ. ಹೀಗಾಗಿ ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆ ಸಮಾರಂಭದಲ್ಲಿ ಪಾಲ್ಗೊಳ್ಳುವವರ ಬಗ್ಗೆ ನನಗೆ ಚಿಂತೆಯುಂಟಾಗಿದೆ. ಸಮಾರಂಭದ ದಿನದಂದು ಸರಯು ನದಿಯ ದಡದಲ್ಲಿ ಉಳಿಯುತ್ತೇನೆ ಎಂದು ನಾನು ದೇವಾಲಯದ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದಿದ್ದಾರೆ.
ನಾನು ಇಂದು ಭೋಪಾಲ್ನಿಂದ ಹೊರಡುತ್ತೇನೆ. ನಾಳೆ ಸಂಜೆ ಅಯೋಧ್ಯೆಯನ್ನು ತಲುಪುವವರೆಗೂ ಕೂಡ ನಾನು ಕೋವಿಡ್ ಸೋಂಕಿತರೊಂದಿಗೆ ಸಂಪರ್ಕ ಹೊಂದುವ ಸಾಧ್ಯತೆ ಹೆಚ್ಚಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಪ್ರಧಾನಿ ಮತ್ತು ಇತರರು ಭಾಗವಹಿಸುವ ಕಾರ್ಯಕ್ರಮದಿಂದ ನಾನು ದೂರವಿರುವುದು ಉತ್ತಮವಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಇತರರು ಕಾರ್ಯಕ್ರಮ ಮುಗಿಸಿಕೊಂಡು ತೆರಳಿದ ಬಳಿಕ ನಾನು ಅಯೋಧ್ಯೆಗೆ ತೆರಳಿ ದರ್ಶನ ಪಡೆಯುತ್ತೇನೆ ಎಂದು ತಿಳಿಸಿದ್ದಾರೆ.



