ಹೈದರಾಬಾದ್: ಆಗಸ್ಟ್ 1ರ ಬಕ್ರೀದ್ ಆಚರಣೆಗೆ ಗೋವುಗಳನ್ನು ಬಲಿ ಕೊಡದಂತೆ ತೆಲಂಗಾಣ ಗೃಹ ಸಚಿವ ಮೊಹಮ್ಮದ್ ಅಲಿ ಮುಸ್ಲಿಮರಲ್ಲಿ ಮನವಿ ಮಾಡಿದ್ದಾರೆ.
ಎಲ್ಲಾ ಧರ್ಮಗಳನ್ನು ಗೌರವದಿಂದ ಕಾಣುವ ಜಾತ್ಯತೀತ ತತ್ವಗಳಿಗೆ ತೆಲಂಗಾಣ ಪ್ರಾಮುಖ್ಯತೆ ಪಡೆದಿದೆ. ಜಾತ್ಯತೀತತೆಯ ಮನೋಭಾವದಿಂದ ಬಕ್ರಿದ್ ಆಚರಿಸಬೇಕು ಎಂದು ಮನವಿ ಮಾಡಿದ್ದಾರೆ.
ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿ ಜಾತ್ಯತೀತ ತತ್ವಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ. ನಿಜಾಮ್ ಮತ್ತು ಕುತುಬ್ ಶಾಹಿ ಆಳ್ವಿಕೆಯಲ್ಲಿಯೂ ಜಾತ್ಯತೀತತೆ ಅಸ್ತಿತ್ವದಲ್ಲಿತ್ತು. ಐತಿಹಾಸಿಕ ಚಾರ್ಮಿನಾರ್ನ ನಾಲ್ಕು ಮಿನಾರ್ಗಳು ಹಿಂದೂ, ಮುಸ್ಲಿಂ, ಸಿಖ್ ಮತ್ತು ಕ್ರಿಶ್ಚಿಯನ್ ಧರ್ಮದ ಸಂಕೇತಗಳಾಗಿ ಕಂಡುಬರುತ್ತವೆ. ಇವೆಲ್ಲವೂ ಸಮಾನ ಗೌರವವನ್ನು ಸೂಚಿಸುತ್ತವೆ ಎಂದು ಅವರು ಪ್ರತ್ಯೇಕ ವಿಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.
ಹಸುಗಳನ್ನು ಹಿಂದೂಗಳು ಪೂಜಿಸುವುದರಿಂದ ಅವುಗಳನ್ನು ಬಲಿ ನೀಡಬಾರದು. ಕುರಿ, ಮೇಕೆ ಸೇರಿದಂತೆ ಬೇರೆ ಇತರೆ ಪ್ರಾಣಿಗಳನ್ನು ಬಲಿ ಕೊಡಲು ಅವಕಾಶವಿದೆ. ಪ್ರಾರ್ಥನೆ ವೇಳೆ ದೈಹಿಕ ಅಂತರ ಕಾಪಾಡಿಕೊಳ್ಳಬೇಕು. ಪ್ರಾಣಿಗಳ ಮಾರಾಟ ಮತ್ತು ಖರೀದಿಯ ಸಮಯದಲ್ಲೂ ಸುರಕ್ಷತೆ ಪಾಲಿಸಬೇಕು ಎಂದಿದ್ದಾರೆ.



