ಡಿವಿಜಿ ಸುದ್ದಿ, ಕೋಲಾರ: ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಗುಣಮುಖವಾಗಿರುವರಲ್ಲಿ ಮತ್ತೆ ಸೋಂಕು ಕಾಣಿಸಿಕೊಳ್ಳಲಾರಂಭಿಸಿದೆ.
ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇದುವರೆಗೂ ಸುಮಾರು 284 ಮಂದಿ ಜನರು ಕೊರೊನಾದಿಂದ ಗುಣಮುಖರಾಗಿದ್ದಾರೆ. ಆದರೆ, ಈಗ ಕೊರೊನಾ ಗೆದ್ದು ಬಂದ ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ 46 ವರ್ಷದ ಮಹಿಳೆಯಲ್ಲಿ ಮತ್ತೆ ಕೊರೊನಾ ಸೋಂಕು ಪತ್ತೆಯಾಗಿದೆ. ಇದು ಸದ್ಯ ಆರೋಗ್ಯ ಇಲಾಖೆಯ ಮತ್ತು ಕೋಲಾರ ಜನರ ನಿದ್ದೆಗೆಡಿಸಿದೆ.
ಜಿಲ್ಲಾಡಳಿತ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಹೊರ ಹೋಗಿರುವ ಎಲ್ಲರನ್ನು ಮತ್ತೊಮ್ಮೆ ಕೊರೊನಾ ಟೆಸ್ಟ್ ಮಾಡಲು ಹಾಗೂ ಹೋಂ ಕ್ವಾರಂಟೈನ್ ಮಾಡಲು ನಿರ್ಧರಿಸಿದೆ. ಜೊತೆಗೆ ಬಿಡುಗಡೆಯಾಗಿ ಮನೆಗಳಿಗೆ ತೆರಳಿರುವವರ ಮೇಲೆ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ.
ಒಂದು ಬಾರಿ ಕೊರೊನಾ ಸೋಂಕಿನಿಂದ ಗುಣವಾಗಿದ್ದ ಮಹಿಳೆಯಲ್ಲಿ ಕೆಲವು ಸೋಂಕಿನ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಅವರನ್ನು ಮತ್ತೆ ಕೋವಿಡ್ ಟೆಸ್ಟ್ ಮಾಡಿಸಿದಾಗ ಆ ಮಹಿಳೆಯಲ್ಲಿ ಪಾಸಿಟಿವ್ ಬಂದಿದೆ. ಹಾಗಾಗಿ ಮತ್ತೆ ಮಹಿಳೆಯನ್ನು ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಸೋಂಕು ಮತ್ತೊಮ್ಮೆ ಹೇಗೆ ಬಂತೆಂದು ಕಾರಣ ಹುಡುಕಾಟ ಮಾಡುತ್ತಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ ಕೊರೊನಾ ಸೋಂಕಿಗೆ 19 ಜನ ಬಲಿಯಾಗಿದ್ದಾರೆ ಇಂಥ ಪರಿಸ್ಥಿತಿಯಲ್ಲಿ ಗುಣಮುಖರಾದವರಲ್ಲಿ ಸೋಂಕು ಮತ್ತೆ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.