ಡಿವಿಜಿ ಸುದ್ದಿ, ಬೆಂಗಳೂರು: ಒಂದು ವಾರದಲ್ಲಿ10,100 ಹಾಸಿಗೆಯ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಬೆಂಗಳೂರಿನ ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ನಿರ್ಮಾಣವಾಗುತ್ತಿರುವ ಕೋವಿಡ್ ಕೇರ್ ಸೆಂಟರ್ ವೀಕ್ಷಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಲ್ಲಿ ಕೊರೊನಾ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಜನತರು ಭಯ ಪಡುವ ಅಗತ್ಯವಿಲ್ಲ. ಜನ ವಿಶ್ವಾಸ ಕಳೆದುಕೊಳ್ಳಬಾರದು. ಸರ್ಕಾರದ ಜೊತೆ ಕೈ ಜೋಡಿಸಬೇಕು ಎಂದು ಕರೆ ನೀಡಿದರು.
ಯಾವುದೇ ಕಾರಣಕ್ಕೂ ಜನರು ಬೆಂಗಳೂರು ಬಿಟ್ಟು ತಮ್ಮ ಊರುಗಳಿಗೆ ಹೋಗಬಾರದು. ಹಳ್ಳಿಗಳಿಗೆ ಸೋಂಕು ಹರಡುವ ಸಾಧ್ಯತೆ ಇದ್ದು, ಬೆಂಗಳೂರು ಬಿಟ್ಟು ಹೋಗಬೇಡಿ. ಕೊರೊನಾ ಒಂದೆರಡು ದಿನದಲ್ಲಿ ಹೋಗುವ ಕಾಯಿಲೆ ಅಲ್ಲ. ಇದು ಇನ್ನು ಕೆಲವು ತಿಂಗಳು ಕಾಲ ಮುಂದುವರಿಯಲಿದೆ. ಪ್ರತಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದರು.
ಬೆಂಗಳೂರಿನಲ್ಲಿ ಹೆಚ್ಚುವರಿಯಾಗಿ ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ 10 ಸಾವಿರದ 100 ಹಾಸಿಗೆಯ ಕೇಂದ್ರ ತೆರೆಯಲಾಗಿದೆ. ಇನ್ನೊಂದು ವಾರದಲ್ಲಿ ಕಾರ್ಯಾರಂಭವಾಗಲಿದೆ. ಈಗಾಗಲೇ ನಗರದಲ್ಲಿ ಇರುವ ಆಸ್ಪತ್ರೆಗಳು ತುಂಬಿ ಪಕ್ಷದಲ್ಲಿ ಈ ಸೆಂಟರ್ ಉಪಯೋಗಿಸಿಕೊಳ್ಳಲಾಗುವುದು. ಈ ಕೇಂದ್ರದಲ್ಲಿ ಅಗತ್ಯ ಎಲ್ಲ ರೀತಿಯ ಮೂಲ ಸೌಲಭ್ಯ ಒದಗಿಸಲಾಗಿದೆ ಎಂದರು.
ಪ್ರತಿ ನೂರು ರೋಗಿಗೆ ಒಬ್ಬರು ವೈದ್ಯರು, 2 ನರ್ಸ್, ಸಹಾಯಕ ನರ್ಸ್, 1 ಸಹಾಯ ಸಿಬ್ಬಂದಿ,1 ಸ್ವಚ್ಛತಾ ಸಿಬ್ಬಂದಿ, 2 ಮಾರ್ಷಲ್ ಸೇರಿದಂತೆ 2 ಸಾವಿರ ಸಿಬ್ಬಂದಿಯನ್ನು ಕೋವಿಡ್ ಕೇರ್ ಸೆಂಟರ್ ನಿಯೋಜನೆ ಮಾಡಲಾಗುವುದು.ಏನಾದ್ರೂ ಲೋಪ-ದೋಷ ಕಂಡು ಬಂದಲ್ಲಿ ಕೂಡ ಸಂಪರ್ಕಿಸಲು 24 ತಾಸು ಕಂಟ್ರೂಲ್ ರೂಮ್ ಓಪನ್ ಇರಲಿದೆ. ಈ ಕೇರ್ಸ ಸೆಂಟರ್ ಸಮೀಪದ ಆಸ್ಪತ್ರೆಗಳ ಸಂಯೋಜನೆ ಆಗಲಿದೆ ಎಂದು ತಿಳಿಸಿದರು.