ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲೆಯಲ್ಲಿ ಭತ್ತದ ಸಸಿ ಮಡಿ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಬಿತ್ತನೆಯಾಗಿ ೧೦ ರಿಂದ ೧೨ ದಿವಸದ ಸಸಿಮಡಿಯಲ್ಲಿ ಹಳದಿ ಕಾಂಡ ಕೊರಕದ ಕೀಟವು ಎಲೆಯ ತುದಿಯಲ್ಲಿ ತತ್ತಿಗಳ ಗುಂಪು ಇಡುತ್ತದೆ.
ಒಂದು ಗುಂಪಿನಲ್ಲಿ ಸುಮಾರು 15 ರಿಂದ 80 ಮೊಟ್ಟೆಗಳು ಇರುತ್ತವೆ. ಈ ಮೊಟ್ಟೆಗಳಿಂದ ಮರಿ ಹುಳುವು ಭತ್ತದ ಕಾಂಡವನ್ನು ಕೊರೆದು ಸುಳಿಯನ್ನು ಒಣಗುವಂತೆ ಮಾಡುತ್ತದೆ. ಇಂತಹ ಸಸಿಗಳು ನಾಟಿ ಮಾಡಲು ಯೋಗ್ಯವಾಗಿರುವುದಿಲ್ಲ.
ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ತಜ್ಞ ಮಲ್ಲಿಕಾರ್ಜುನ ಬಿ.ಓ. ಅವರು ಭತ್ತದ ಸಸಿ ಮಡಿಗಳಿಗೆ ಭೇಟಿ ಮಾಡಿದ ಸಂದರ್ಭದಲ್ಲಿ ಹಳದಿ ಕಾಂಡ ಕೊರಕದ ಬಾಧೆ ನಿರ್ವಹಣಗೆ ತತ್ತಿನಾಶಕ ಪ್ರೋಫೇನೋಪಾಸ್ 2 ಮಿ.ಲೀ. ಅಥವಾ ಕ್ಲೋರ್ಪೈರಿಫಾಸ್ 2 ಮಿ.ಲೀ. ಲೀಟರ್ನಲ್ಲಿ ಕರಗಿಸಿ ಸಸಿ ಮಡಿಗೆ ಸಿಂಪರಣೆ ಮಾಡಬೇಕು. 2 ಮೋಹಕ ಬಲೆಗಳ ಅಳವಡಿಸುವುದು ಸೂಕ್ತವೆಂದು ತಿಳಿಸಿದರು.
ಸಸಿಗಳನ್ನು ನಾಟಿ ಮಾಡುವ ಸಂದರ್ಭದಲ್ಲಿ ತುದಿಯ ಎಲೆಗಳನ್ನು ಚಿವುಟಿ ನಾಟಿ ಮಾಡುವುದರಿಂದ ಹಳದಿ ಕಾಂಡಕೊರಕದ ಬಾಧೆಯನ್ನು ತಡೆಯಬಹುದು ಎಂದು ಕೇಂದ್ರದ ಮಣ್ಣು ವಿಜ್ಞಾನಿ ಸಣ್ಣಗೌಡ್ರು ಹೆಚ್.ಎಂ. ತಿಳಿಸಿದರು.