ಹೈದರಾಬಾದ್: ಅಕ್ರಮವಾಗಿ ಸಂಗ್ರಹಿಸಿದ್ದ 1.03 ಕೋಟಿ ಮೌಲ್ಯದ ವಿದೇಶಿ ಸಿಗರೇಟನ್ನು ಟಾಸ್ಕ್ ಫೋರ್ಸ್ ಪೊಲೀಸರು ವಶಪಡಿಸಿಕೊಂಡಿದ್ದು, ಐವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಸುಮಾರು 1.03 ಕೋಟಿ ಮೌಲ್ಯದ ವಿದೇಶಿ ಸಿಗರೇಟ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಖಚಿತ ಮಾಹಿತಿಯ ಹಿನ್ನೆಲೆ ಸಿದ್ದಿಯಂಬಾರ್ ಬಜಾರ್‌ನ ಸಮೀಪದಲ್ಲಿ ಆಟೋವೊಂದನ್ನು ಪೊಲೀಸರು ತಡೆದು ತಪಾಸಣೆ ಮಾಡಿದ್ದಾರೆ. ಆಗ ಆಟೋದಲ್ಲಿ ವಿವಿಧ ಬ್ರಾಂಡ್‍ಗಳ ಅಕ್ರಮವಾಗಿ ಆಮದು ಮಾಡಿಕೊಂಡ ವಿದೇಶಿ ಸಿಗರೇಟ್‍ಗಳ 503 ಪೆಟ್ಟಿಗೆ ಪತ್ತೆಯಾಗಿವೆ. ತಕ್ಷಣ ಆಟೋ ಚಾಲಕನನ್ನು ಬಂಧಿಸಿ ಸಿಗರೇಟ್ ಬಾಕ್ಸ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಆಟೋ ಚಾಲಕನಿಂದ ಪಡೆದ ಮಾಹಿತಿಯ ಆಧಾರದ ಮೇಲೆ ಪೊಲೀಸರು ಗೋಶಮಹಲ್‍ನ ಸರ್ನಾ ಟ್ರಾನ್ಸ್ ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್‍ಗೆ ತೆರಳಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ವಿಪುಲ್ ರಾಂಕಾ (42), ಜಗದೀಶ್ ಕುಮಾರ್ (19), ದೂಂಗಾರ್ಚಂದ್ ಶ್ರೀ ಶ್ರೀಮಲ್ (65), ಪವನ್ ಕುಮಾರ್ ಪೆರ್ತಾನಿ (42) ಮತ್ತು ಸರ್ನಾ ಟ್ರಾನ್ಸ್ ಪೋರ್ಟ್ ನ ಡೆಲಿವರಿ ಏಜೆಂಟ್ ಎಂ.ಎ.ಹನೀಫ್ ಎಂದು ಗುರುತಿಸಲಾಗಿದೆ.
ಆರೋಪಿಗಳು ದೆಹಲಿಯಿಂದ ಅಕ್ರಮವಾಗಿ ವಿದೇಶಿ ಸಿಗರೇಟುಗಳನ್ನು ಆಮದು ಮಾಡಿಕೊಳ್ಳುತ್ತಿದ್ದರು. ಬಳಿಕ ಅದನ್ನು ಸ್ಥಳೀಯ ಪಾನ್ ಅಂಗಡಿಗಳು ಮತ್ತು ಕಿರಾನಾ ಅಂಗಡಿಗಳಿಗೆ ಸರಬರಾಜು ಮಾಡುತ್ತಿದ್ದರು. ಈ ಮೂಲಕ ಅವರು ಸರ್ಕಾರಕ್ಕೆ ತೆರಿಗೆ ಕಟ್ಟುವುದನ್ನು ತಪ್ಪಿಸಿಕೊಂಡಿದ್ದಾರೆ ಎಂದು ಹೈದರಾಬಾದ್ ಪೊಲೀಸ್ ಆಯುಕ್ತ ಅಂಜನಿ ಕುಮಾರ್ ಹೇಳಿದ್ದಾರೆ.



