ಡಿವಿಜಿ ಸುದ್ದಿ, ಬೆಂಗಳೂರು: ದಾವಣಗೆರೆಯ ಜೆಜೆಎಂ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ನೀಡಲು ನಮ್ಮ ಬಳಿ ಹಣ ಇಲ್ಲ ಎಂದು ಮೆಡಿಕಲ್ ಕಾಲೇಜಿನ ಅಧ್ಯಕ್ಷರೂ ಆಗಿರುವ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು. ಇದಕ್ಕೆ ಹಾಸ್ಯವಾಗಿಯೇ ಪ್ರತಿಕ್ರಿಯಿಸಿದ ಸಿಎಂ ಯಡಿಯೂರಪ್ಪ ನಿಮ್ಮ ಬಳಿ ಹಣ ಇಲ್ಲ ಎಂದ್ರೆ ಯಾರು ನಂಬ್ತಾರೆ ಹೇಳಿ ಎಂದರು.
ಶುಕ್ರವಾರ ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಶಾಮನೂರು ಶಿವಶಂಕರಪ್ಪ, ನಮಗೆ ವಿದ್ಯಾರ್ಥಿಗಳು ನೀಡುವ ಶುಲ್ಕದ ಹಣ ಕಡಿಮೆ. ನಾವು ಸಂಕಷ್ಟದಲ್ಲಿದ್ದೇವೆ. ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ನೀಡಲು ನಮ್ಮ ಬಳಿ ಹಣ ಇಲ್ಲ ಎಂದು ಹೇಳಿದರು. ಸಿಎಂ ನಗುತ್ತಲೇ ನಿಮ್ಮ ಬಳಿ ಹಣ ಇಲ್ಲ ಎಂದರೆ ನಂಬುವ ಮಾತಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಸಾಕಷ್ಟು ವೈದ್ಯಕೀಯ ಕಾಲೇಜುಗಳಿವೆ. ನಿಮ್ಮ ಒಂದು ಕಾಲೇಜಿನ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ಕೊಟ್ಟರೆ, ಬೇರೆ ಕಾಲೇಜಿನ ವಿದ್ಯಾರ್ಥಿಗಳು ಬೇಡಿಕೆ ಇಡುತ್ತಾರೆ. ಹೀಗಾಗಿ ವೈದ್ಯ ವಿದ್ಯಾರ್ಥಿಗಳಿಗೆ ಸರ್ಕಾರ ಶಿಷ್ಯ ವೇತನ ನೀಡಲು ಬರುವುದಿಲ್ಲ. ಇದಕ್ಕೆ ಅಡಿಟ್ ನವರು ಆಕ್ಷೇಪ ಎತ್ತುತ್ತಾರೆ. ಈ ವಿಷಯ ಬಗ್ಗೆ ಸರ್ಕಾರ ಕಾಲೇಜಿಗೆ ನೋಟಿಸ್ ನೀಡಿದ್ದು, ಇದಕ್ಕೆ ಉತ್ತರ ಬಂದಿಲ್ಲ . ಹೀಗಾಗಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸರ್ಕಾರ ಶಿಷ್ಯ ವೇತನ ನೀಡಲು ಬರುವುದಿಲ್ಲ ಎಂದು ತಿಳಿಸಿದರು.



