ಡಿವಿಜಿ ಸುದ್ದಿ, ದಾವಣಗೆರೆ: 16 ತಿಂಗಳ ಶಿಷ್ಯ ವೇತನಕ್ಕೆ ಆಗ್ರಹಿಸಿ ಜೆಜೆಎಂ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಿಂದ ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ಇವತ್ತು ಕೂಡ ಮುಂದುವರಿದೆ.
ಜೆ.ಜೆ.ಎಂ. ವೈದ್ಯಕೀಯ ಕಾಲೇಜಿನ ವೈದ್ಯ ವಿದ್ಯಾರ್ಥಿಗಳು, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಹಯೋಗದೊಂದಿಗೆ ಸೋಮವಾರದಿಂದ ನಗರದ ಜಯದೇವ ವೃತ್ತದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದು, ಸರ್ಕಾರ ಶಿಷ್ಯ ವೇತನ ನೀಡುವರೆಗೂ ಮುಷ್ಕರ ಕೈ ಬಿಡುವುದಿಲ್ಲ ಎಂದು ವೈದ್ಯಕೀಯ ವಿದ್ಯಾರ್ಥಿಗಳು ಪಟ್ಟು ಮುಂದುವರಿಸಿದ್ದಾರೆ.
ಇಂದು ವೈದ್ಯ ದಿನವಾಗಿದ್ದರೂ ಧರಣಿ ಮುಂದುವರಿಸಿದ ವೈದ್ಯ ವಿದ್ಯಾರ್ಥಿಗಳು ರಕ್ತದಾನ ಮತ್ತು ಶಾಂತವಾಗಿ ಕುಳಿತು ಪುಸ್ತಕ ಓದುವ ಮೂಲಕ ತಮ್ಮ ಹಕ್ಕಿಗಾಗಿ ಪ್ರತಿಭಟನೆ ನಡೆಸಿದರು. ಈ ವೇಳೆ ಸ್ಥಳಕ್ಕೆ ನೇತ್ರ ತಜ್ಞ ಡಾ. ವಸುದೇಂದ್ರ ಭೇಟಿ ನೀಡಿ ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳು ಶಿಷ್ಯ ವೇತನಕ್ಕಾಗಿ ಕಳೆದ ಮೂರು ದಿನಗಳಿಂದ ಧರಣಿ ನಡೆಸುತ್ತಿದ್ದಾರೆ. ಸರ್ಕಾರ ಈ ಕೂಡಲೇ ವಿದ್ಯಾರ್ಥಿಗಳ ಶಿಷ್ಯ ವೇತನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ವೈದ್ಯಕೀಯ ವಿದ್ಯಾರ್ಥಿಗಳು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಾ ಪಾಳಿಯ ಮೇಲೆ ಹೋರಾಟದಲ್ಲಿ ಭಾಗಿಯಾಗುತ್ತಿದ್ದಾರೆ. ಸರ್ಕಾರ ತನ್ನ ಕರ್ತವ್ಯ ಮರೆಯಬಾದರು ಎಂದು ತಿಳಿಸಿದರು.
ಇಂದು ಕೂಡ ಜಿಲ್ಲಾಧಿಕಾರಿ ಮಹಾಮತೇಶ್ ಬೀಳಗಿ ಅವರು ವೈದ್ಯ ವಿದ್ಯಾರ್ಥಿಗಳಿಗೆ ಪತ್ರದ ಮೂಲಕ ಎಚ್ಚರಿಕೆ ನೀಡಿದ್ದು, ಸಂಜೆ 6 ಗಂಟೆ ನಂತರ ಪ್ರತಿಭಟನೆ ಮುಂದುವರಿಸಿದರೆ, ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಇಂದು 30ಕ್ಕೂ ಹೆಚ್ಚು ವೈದ್ಯಕೀಯ ವಿದ್ಯಾರ್ಥಿಗಳು ರಕ್ತದಾನ ಮಾಡಿದರು.
ಪಿಜಿ ವಿದ್ಯಾರ್ಥಿ ಡಾ. ಹರೀಶ್ , ಡಾ.ರಾಹುಲ್, ಡಾ.ಮೇಘನಾ, ಡಾ. ನಿಧಿ ಸೇರಿದಂತೆ ನೂರಾರು ವೈದ್ಯ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.