ಡಿವಿಜಿ ಸುದ್ದಿ, ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಪತಿಯಿಂದಲೇ ಪತ್ನಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ಘಟನೆ ರಾಜಗೋಪಾಲನಗರದ ಲವಕುಶನಗರದಲ್ಲಿ ನಡೆದಿದೆ.
ಹೇಮಾ ಕೊಲೆಯಾದ ದುರ್ದೈವಿ. ಆರೋಪಿ ಪತಿ ಮಂಜುನಾಥ್ ರಸ್ತೆಯಲ್ಲಿ ಅಟ್ಟಾಡಿಸಿ ಪತ್ನಿಯನ್ನು ಕೊಲೆ ಮಾಡಿದ್ದಾನೆ. ಕುಣಿಗಲ್ ಮೂಲದ ಹೇಮಾಗೆ ಆರೋಪಿ ಮಂಜುನಾಥ್ ಜೊತೆ 12 ವರ್ಷಗಳ ಹಿಂದೆ ಮದುವೆಯಾಗಿತ್ತು. ಮೃತ ಹೇಮಾ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡಿಕೊಂಡಿದ್ದಳು. ಮಂಗಳವಾರ ಸಂಜೆ ಹೇಮಾ ಪತಿಯ ವಿರುದ್ಧ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಳು. ಅದೇ ವಿಚಾರವಾಗಿ ಮನೆಯಲ್ಲಿ ಗಲಾಟೆ ಆಗಿದ್ದು, ಆರೋಪಿ ಹೇಮಾಗೆ ಚಾಕುವಿನಿಂದ ಇರಿದಿದ್ದಾನೆ. ಗಾಬರಿಯಿಂದ ಪತ್ನಿ ಮನೆಯಿಂದ ಹೊರಗೆ ಓಡಿ ಬಂದಿದ್ದಾಳೆ. ಆಕೆಯನ್ನು ಹಿಂಬಾಲಿಸಿಕೊಂಡು ಬಂದು ಬೀದಿಯಲ್ಲಿ ನಡು ರಸ್ತೆಯಲ್ಲಿಯೇ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ಬಳಿಕ ಆರೋಪಿ ಮಂಜುನಾಥ್ ಪರಾರಿಯಾಗಿದ್ದಾನೆ.
ಮಾಹಿತಿ ತಿಳಿದ ನಂತರ ಸ್ಥಳಕ್ಕೆ ಬಂದ ರಾಜಗೋಪಾಲನಗರ ಪೊಲೀಸರು ಪರಿಶೀಲನೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಸದ್ಯಕ್ಕೆ ಈ ಕುರಿತು ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



